ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್
ಚುನಾವಣೆ ಅಂದರೆ ಸಾಕು ಅದರ ಕಾವು ದಿನದಿಂದ ದಿನಕ್ಕೆ ಕಾವೇರುತ್ತಿರುತ್ತದೆ. ಹಾಗಾಗಿ ಈ ಹಸಿ ಬಿಸಿಗಳ ನಡುವೆ ಪ್ರಚಾರ ಗಿಮಿಕ್ ಲಾಬಿಗಳು ನಡೆಯುತ್ತಲೆ ಇರುತ್ತವೆ.ಅದೇ ರೀತಿ ವಿಧಾನ ಪರಿಷತ್ ಚುನಾವಣೆಗೆ ಎಲ್ಲಾ ರಿತಿಯ ಸಿದ್ದತೆಗಳು ಕೂಡ ನಡೆಯುತ್ತಲೆ ಇವೆ. ಚುನಾವಣೆಗೆ ಕಾಂಗ್ರೆಸ್ ಪಕ್ಷ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿ ಪರಿಷತ್ ನೇಮಕದಲ್ಲಿ ಕಾಂಗ್ರೆಸ್ ಅಹಿಂದ ಸಮುದಾಯಗಳಿಗೆ ಸಂಪೂರ್ಣವಾಗಿ ಮಣೆಹಾಕಿದೆ ಎಂದು ಹೇಳಲಾಗುತ್ತಿದೆ.
ನಂಬಲರ್ಹ ಮೂಲಗಳ ಪ್ರಕಾರ ಪರಿಷತ್ತಿಗೆ ವಿಧಾನಸಭೆಯಿಂದ ನಡೆಯುವ ಚುನಾವಣೆಗೆ ಮುಸ್ಲಿಂ ಕೋಟಾದಿಂದ ನಜೀರ್ ಅಹ್ಮದ್ ಮತ್ತು ಸವಿತಾ ಸಮಾಜ ಪ್ರತಿನಿಧಿಸುವ ಎಂ.ಸಿ. ವೇಣುಗೋಪಾಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಇನ್ನು ಸಾದರ ಸಮಾಜಕ್ಕೆ ಸೇರಿದ ಮುಖ್ಯಮಂತ್ರಿ ಚಂದ್ರು ಹಾಗೂ ಲಂಬಾಣಿ ಜನಾಂಗದ ಪ್ರಕಾಶ್ ರಾಥೋಡ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಈ ಬಾರಿ ಪರಿಷತ್ ನೇಮಕದಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಅಹಿಂದ ವರ್ಗಕ್ಕೆ ಮಣೆ ಹಾಕಿದಂತೆ ಆಗಿದೆ. ಈ ನಾಲ್ಕು ಮಂದಿಯ ಪೈಕಿ ಎಂ.ಸಿ. ವೇಣುಗೋಪಾಲ್ ಅವರ ಪರವಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಲಾಬಿ ನಡೆಸುತ್ತಿದ್ದರೆ ನಜೀರ್ ಅಹಮದ್ ಹಾಗೂ ಮುಖ್ಯಮಂತ್ರಿ ಚಂದ್ರು ಪರವಾಗಿ ಸಮನ್ವಯ ಸಮಿತಿ ಅಧ್ಯಕ್ಷರಾದ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾಬಿ ನಡೆಸಿದ್ದರು. ಇನ್ನು ಪ್ರಕಾಶ್ ರಾಥೋಡ್ ಪರವಾಗಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್‌ನ ಕೆಲ ಮುಖಂಡರು ಲಾಬಿ ನಡೆಸಿದ್ದರು ಎನ್ನಲಾಗಿದೆ. ಅಷ್ಟೆ ಅಲ್ಲದೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಈ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವ ಭೀತಿಯೂ ಕಾಂಗ್ರೆಸ್‌ಗೆ ಇದೆ. ಕಾಂಗ್ರೆಸ್‌ನ ಕೆಲ ಶಾಸಕರು ಈಗಾಗಲೇ ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಈ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಬಹುದು ಎಂಬ ಭೀತಿಯೂ ಇದೆ.ಹಾಗಾಗಿ ಎಲ್ಲವನ್ನು ತಿಳಿದುಕೊಂಡು ತುಂಬಾ ಯೋಚನೆ ಮಾಡಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
Comments