ಜೆಡಿಎಸ್ ಮೇಲೆ ಸಾಫ್ಟ್ ಆಗಿಯೇ ಇರಿ…!! ಬಿಎಸ್ವೈ ಗೆ ‘ಷಾ’ ಹೀಗೆ ಹೇಳಿದ್ದೇಕೆ..!?

ಈಗಾಗಲೇ ಮೈತ್ರಿ ಸರ್ಕಾರದ ವಿರುದ್ದ ಸಾಕಷ್ಟು ಊಹಾ ಪೋಹಾಗಳು ಕೇಳಿ ಬರುತ್ತಿವೆ. ಅದರ ಬೆನ್ನಲ್ಲೆ ಮೈತ್ರಿ ಸರ್ಕಾರದಲ್ಲಿ ಉಂಟಾಗುತ್ತಿರುವ ಭಿನ್ನಮತದ ಪರಿಸ್ಥಿತಿಯ ಲಾಭ ಪಡೆಯಲು ಕಸರತ್ತು ಆರಂಭ ಮಾಡಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಜೆಡಿಎಸ್ ಬಗ್ಗೆ ಯಾವುದೇ ರೀತಿ ಟೀಕೆ ಮಾಡದಂತೆ ರಾಜ್ಯ ನಾಯಕರಿಗೆ ಸೂಚನೆಯನ್ನು ನೀಡಿದ್ದಾರೆ.. ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಆ ಪಕ್ಷದ ಯಾವುದೇ ತೀರ್ಮಾನಗಳನ್ನಾಗಲಿ, ಅಥವಾಆ ಪಕ್ಷದ ನಾಯಕರ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಟೀಕೆ ಮಾಡದೆ ಮೃದುಧೋರಣೆ ಅನುಸರಿಸುವಂತೆ ಖುದ್ದು ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ ಅವರು ನಿರ್ದೇಶನವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಸೇರಿದಂತೆ ಹಲವು ನಾಯಕರ ಜೊತೆ ದೂರವಾಣಿ ಮೂಲಕ ಅಮಿತ್ ಷಾ ಮಾತನಾಡಿ, ಜೆಡಿಎಸ್ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ. ಕುಮಾರಸ್ವಾಮಿಯವರು ಒಲ್ಲದ ಮನಸ್ಸಿನ ಪರಿಸ್ಥಿತಿಯಲ್ಲಿ ಸರ್ಕಾರವನ್ನು ರಚಿಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ನೀಡುತ್ತಿರುವ ಹೇಳಿಕೆಗಳು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಇಷ್ಟವಾಗುತ್ತಿಲ್ಲ. ಯಾವುದೋ ಒಂದು ಕಾರಣಕ್ಕಾಗಿ ಸರ್ಕಾರ ನಡೆಯುತ್ತಿದೆ ಎಂದು ಎಲ್ಲರಿಗೂ ತಿಳಿದೆ ಇದೆ. ಇಂತಹ ಸಮಯದಲ್ಲಿ ಜೆಡಿಎಸ್ ಜೊತೆ ನೀವು ಆಪ್ತವಾಗಿರಬೇಕೆ ವಿನಃ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಡಿಸೆಂಬರ್ ಒಳಗೆ ಸರ್ಕಾರ ಮುಂದುವರಿಯುವ ಯಾವುದೇ ಲಕ್ಷಣಗಳು ಕೂಡ ಕಾಣುತ್ತಿಲ್ಲ. ಕಾಂಗ್ರೆಸ್‍ನಲ್ಲಿ ಉಪ ಮುಖ್ಯಮಂತ್ರಿಯಾದ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಹೊರತುಪಡಿಸಿದರೆ ಉಳಿದವರಿಗೆ ಸರ್ಕಾರ ಮುಂದುವರಿಯುವುದು ಕೂಡ ಇಷ್ಟವಿಲ್ಲ. ಒಂದೊಮ್ಮೆ ಸರ್ಕಾರ ಪತನವಾದರೆ ಬಿಜೆಪಿಯ ಮೇಲೆ ಯಾವುದೇ ರೀತಿಯ ಆರೋಪಗಳು ಬಾರದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಹೇಳಿದ್ದಾರೆ.
Comments