ಸಂಪುಟ ವಿಸ್ತರಣೆ : 'ಆಪರೇಷನ್ ಕಮಲ'ಕ್ಕೆ ಸೆಡ್ಡು ಹೊಡೆದ ಸಚಿವ ಡಿ.ಕೆ.ಶಿ

ಸಂಪುಟ ವಿಸ್ತರಣೆ ತಡವಾಗುತ್ತಿರುವ ಹಿನ್ನೆಲೆ, ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಿ ಎಂದು ಕಾಂಗ್ರೆಸ್ ನ ಕೆಲವು ನಾಯಕರು ಒತ್ತಾಯ ಹೇರಲು ಮುಂದಾಗಿದ್ದಾರೆ. ಆಷಾಢ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುತ್ತೆ ಎಂದು ಹೇಳಲಾಗಿತ್ತಾದರೂ, ಸ್ಥಳೀಯ ಸಂಸ್ಥೆ ಚುನಾವಣೆ ನೆಪ ಹೇಳಿ ಸೆಪ್ಟೆಂಬರ್ ವರೆಗೆ ವಿಸ್ತರಣೆ ಪ್ರಕ್ರಿಯೆ ಮುಂದೂಡುವ ಪ್ರಯತ್ನ ನಡೆದಿದೆ.
ಮತ್ತೆ ನೆಪ ಹೇಳಿ ಮುಂದೂಡಿದರೆ ಮೈತ್ರಿ ಸರ್ಕಾರಕ್ಕೆ ಕಂಟಕವಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳಿ, ಇಲ್ಲವಾದರೆ ಸರ್ಕಾರಕ್ಕೆ ತೊಂದರೆಯಾಗಲಿದೆ ಎಂದು ಸಚಿವಾಕಾಂಕ್ಷಿಗಳು ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ. ಸಚಿವ ಸ್ಥಾನ ವಂಚಿತ ಕೆಲ ಶಾಸಕರ ಜೊತೆ ಬಿಜೆಪಿ ಸಂಪರ್ಕ ನಡೆಸಿದೆ ಎಂಬ ಊಹಾಪೋಹ ಹರಿದ್ದಾಡುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯ ಆಪರೇಷನ್ ಬಗ್ಗೆ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆಗೂ ಮೊದಲೇ ಸಮಸ್ಯೆ ಎದುರಾಗಲಿದೆ. ಈಗಲೇ ಈ ಬಗ್ಗೆ ಗಮನಹರಿಸಿ, ಮತ್ತೆ ದಿನ ದೂಡಬೇಡಿ ಎಂದು ಪಕ್ಷದ ಹೈಕಮಾಂಡ್ ಗೆ ಸಂದೇಶ ಕಳಿಸುವ ಪ್ರಯತ್ನವೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
Comments