ಐಫೋನ್ ಗಿಫ್ಟ್ ಕುರಿತು ಬಿಜೆಪಿ ಸದಸ್ಯ ರಾಜೀವ್ ಚಂದ್ರಶೇಖರ್ ಗೆ ಖಡಕ್ ಟಾಂಗ್ ಕೊಟ್ಟ ಡಿಕೆಶಿ

ರಾಜ್ಯಸಭಾ ಬಿಜೆಪಿ ಸದಸ್ಯ ರಾಜೀವ್ ಚಂದ್ರಶೇಖರ್ ಹಣವಂತರು. ಹೀಗಾಗಿ ಐಫೋನ್ ಗಿಫ್ಟ್ ಅನ್ನು ಮರಳಿಸಿದ್ದಾರೆ. ಬೇರೆಯವರು ಅವರಂತೆ ಶ್ರೀಮಂತರಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರ ಐಫೋನ್ ಗಿಫ್ಟ್ ನೀಡಿರುವ ಬಗ್ಗೆ ಸ್ಪಷ್ಟಿಕರಣ ನೀಡಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು, ನಾನೇ ಐ ಫೋನ್ ನೀಡಿದ್ದೇನೆ. ಅದರಲ್ಲೇನು ತಪ್ಪಿದೆ? ನಾನು ಒಳ್ಳೆಯ ಹೃದಯವಂತಿಕೆಯಿಂದ ಗಿಫ್ಟ್ ನೀಡಿರುವೆ. ಮಾಹಿತಿಗಳು ತ್ವರಿತವಾಗಿ ಸಂಸದರಿಗೆ ತಲುಪಲಿ ಎನ್ನುವ ಉದ್ದೇಶದಿಂದ 50 ಸಾವಿರ ರೂ. ಬೆಲೆಯ ಐಫೋನ್ ಕೊಟ್ಟಿರುವೆ ಎಂದರು. ಒಳ್ಳೆಯ ಉದ್ದೇಶದಿಂದ ರಾಜ್ಯದ ಸಂಸದರಿಗೆ ಐಫೋನ್ ಮತ್ತು ಬ್ಯಾಗನ್ನು ನೀಡಿದ್ದೇವೆ. ಬ್ಯಾಗ್ ಮಾತ್ರ ರಾಜ್ಯ ಸರ್ಕಾರ ನೀಡಿದ್ದು, ಐಫೋನ್ ನಾನೇ ವೈಯ್ಯಕ್ತಿಕವಾಗಿ ಕೊಟ್ಟಿರುವೆ. ಅದರಲ್ಲಿ ಕೆಲವರು ವಾಪಾಸ್ ನೀಡಿದ್ದಾರೆ. ಅದಕ್ಕೆ ನಾನು ಏನು ಮಾಡಲಿ? ಕಳೆದ ವರ್ಷವೂ ಐಫೋನ್ ಕೊಡುಗೆ ನೀಡಿದ್ದೆ, ಅದನ್ನು ಸ್ವೀಕರಿಸಿದ ಹಲವು ಬಿಜೆಪಿ ಸಂಸದರು ನನಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದರು. ಈಗ ಆರೋಪಿಸುತ್ತಿರುವವರ ಕಾಮಾಲೆ ಕಣ್ಣಿಗೆ ಎಲ್ಲವೂ ತಪ್ಪು ಕಾಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
Comments