ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ನಲ್ಲಿ ಯಾರ್ಯಾರಿಗೆ ಸಿಗಲಿದೆ ಸಿಹಿ ಸಿದ್ದಿ..!?ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..
ಜುಲೈ 5 ರಂದು ಮಂಡನೆಯಾಗಲಿರುವ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಸರ್ಕಾರದ ಚೊಚ್ಚಲ ಬಜೆಟ್ ನಲ್ಲಿ ಸಹಕಾರಿ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಿಂದ ರೈತರು ಪಡೆದಿರುವ ಬೆಳೆ ಸಾಲಮನ್ನಾ, ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
2009 ಏಪ್ರಿಲ್ 1 ರಿಂದ 2018 ಮೇ 31 ರವರೆಗೆ ಸಹಕಾರಿ ಮತ್ತು ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ರೈತರು ಪಡೆದುಕೊಂಡಿರುವ ಬೆಳೆಸಾಲವನ್ನು ಮನ್ನ ಮಾಡಲು ಮೈತ್ರಿಕೂಟ ಸರ್ಕಾರದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಸಮ್ಮತಿಸಿವೆ ಎನ್ನಲಾಗಿದೆ. ಬೆಂಗಳೂರಿನ ಕುಮಾರಕೃಪ ಅತಿಥಿ ಗೃಹದಲ್ಲಿ ನಡೆದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿ.ಎಂ.ಪಿ) ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು. ಸಂಸದ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ನೇತ್ರತ್ವದಲ್ಲಿ ಸಭೆ ನಡೆಸಲಾಯಿತು.
ಸಮಿತಿಯ ಸದಸ್ಯರಾದ ಡಿ.ಕೆ.ಶಿವಕುಮಾರ್. ಎಚ್.ಡಿ ರೇವಣ್ಣ, ಅರ್.ವಿ.ದೇಶ್ ಪಾಂಡೆ ಹಾಗೂ ಬಂಡೆಪ್ಪ ಕಾಶಂಪುರ್ ಭಾಗವಹಿಸಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪ್ರಮುಖವಾಗಿ ಎರಡು ಪಕ್ಷಗಳು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಕುರಿತಂತೆ ಚರ್ಚೆ ಮಾಡಲಾಯಿತು. ಸಾಲಮನ್ನಾ ಮಾಡುವುದಕ್ಕೆ ಬೇಕಾದ ಸಂಪನ್ಮೂಲಗಳ ಕ್ರೋಡಿಕರಣದ ಜವಾಬ್ದಾರಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೆಗಲಿಗೆ ನೀಡಲಾಗಿದೆ. ಸಾಲಮನ್ನಾ ವಿಷಯದಲ್ಲಿ ಈ ಇಬ್ಬರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಲಿದೆ. ಉಳಿದಂತೆ ಜೆಡಿಎಸ್ ತನ್ನ ಪ್ರಾಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಗರ್ಭಿಣಿ ಮಹಿಳೆಯರಿಗೆ ತಿಂಗಳ ಮಾಸಶನ 6500 ರೂ ನೀಡಲು ಸಮಿತಿ ಒಪ್ಪಿಗೆ ಸೂಚಿಸಿದೆ. ಇನ್ನು ಜಲಸಂಪನ್ಮೂಲ ಇಲಾಖೆಗೆ 5 ವರ್ಷದಲ್ಲಿ 1ಲಕ್ಷದ 35 ಸಾವಿರ ಕೋಟಿ ಅನುದಾನವನ್ನು ಮೀಸಲಿಡುವುದು, ಹಾಗೂ ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ ನ ಕಾರ್ಯಕ್ರಮಗಳನ್ನು ಮುಂದುವರೆಸಲು ತೀರ್ಮಾನಿಸಲಾಯಿತು.
ಸಮಿತಿಯು ತೆಗೆದುಕೊಂಡಿರುವ ತೀರ್ಮಾನವನ್ನು ಶನಿವಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ವರದಿಯನ್ನು ನೀಡಲಿದೆ. ಭಾನುವಾರ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಉಭಯ ಪಕ್ಷಗಳ ಮುಖಂಡರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೀರಪ್ಪ ಮೊಯ್ಲಿ ಅವರು, ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಕಾರಣಕ್ಕೆ ಹಿಂದಿನ ಬಜೆಟ್ ನ ಯಾವುದೇ ಕಾರ್ಯಕ್ರಮ ನಿಲ್ಲುವುದಿಲ್ಲ. ಆರ್ಥಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಸಲಹೆ ನೀಡುತ್ತೇವೆ ಎಂದರು. ಗ್ರಾಮೀಣಾಭಿವೃದ್ಧಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾಗೆ ನಮ್ಮ ಸಮ್ಮತಿ ಸೂಚಿಸಿದ್ದೇವೆ. ಸದ್ಯ ಸರ್ಕಾರಕ್ಕೆ ಇದೇ ಶಿಫಾರಸು ಮಾಡುತ್ತೇವೆ. ಹಣಕಾಸು ಹೊಂದಾಣಿಕೆ ಹೇಗೆ ಮಾಡಿಕೊಳ್ಳಬೇಕೆಂದು ಸರ್ಕಾರ ತೀರ್ಮಾನಿಸಲಿದೆ ಎಂದಿದ್ದಾರೆ. ಇಂದು ಸಮಿತಿಯ ಮೂರನೇ ಸಭೆ ನಡೆದಿದೆ. ಕಳೆದ ಮೂರು ಸಭೆಯಲ್ಲಿ ಏನೇನು ಚರ್ಚೆ ಆಗಿತ್ತು ಅದಕ್ಕೆಲ್ಲಾ ಪ್ರತ್ಯೇಕ ಕರಡು ಪ್ರತಿ ಸಿದ್ಧ ಪಡಿಸಿದ್ದೇವೆ. ಅದೆಲ್ಲವನ್ನೂ ಸೇರಿಸಿ ಇಂದು ಸಮಗ್ರ ಚರ್ಚೆ ನಡೆಸಿದ್ದೇವೆ. ಸಂತೋಷದ ಸಂಗತಿ ಎಂದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರನಾಳಿಕೆಯ ಸಮತೋಲನ ಮಾಡಿದ್ದೇವೆ. ಅಂತಿಮ ಅನುಷ್ಠಾನಕ್ಕೆ ಯಾವ ಅಂಶ ಸೇರಿಸಬೇಕೆಂಬ ಚರ್ಚೆ ಆಗಿದೆ ಎಂದರು.
Comments