ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಸೋಲಿನ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸಚಿವ ಜಿ.ಟಿ.ಡಿ

ಕಳೆದ ವಿಧಾನಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ವಿರುದ್ಧ ಸಮರ ಸಾರಿದ್ದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಕಾರಣ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೋದಿ ವಿರುದ್ಧ ಯುದ್ಧ ಮಾಡಲು ಹೋಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲನುಭವಿಸಬೇಕಾಯಿತು ಎಂದರು. ಇದೇ ವೇಳೆ ದೆಹಲಿಗೆ ಭೇಟಿ ನೀಡಿದಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದು ನಿಜ. ಆದರೆ, ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉಳಿಸಿಕೊಂಡು ಹೋಗುವುದು ಎರಡೂ ಪಕ್ಷಗಳಿಗೆ ಅನಿವಾರ್ಯವಾಗಿದೆ. ಈ ಸರ್ಕಾರ ಬೀಳುವುದಕ್ಕೆ ಎರಡೂ ಪಕ್ಷಗಳ ನಾಯಕರು ಬಿಡುವುದಿಲ್ಲ. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ತನ್ನ ಐದು ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಆತ್ಮವಿಶ್ವಾಸದಿಂದ ಹೇಳಿದರು.
Comments