'ಕೈ' ಸಚಿವರಿಗೆ ಖಡಕ್ ಸೂಚನೆ ಕೊಟ್ಟ ಡಿಸಿಎಂ ಪರಮೇಶ್ವರ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರಕ್ಕೆ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಉಪ ಮುಖ್ಯಮಂತ್ರಿ ಪರಮೇಶ್ವರ್ ಮುಂದಾಗಿದ್ದು, ಕೆಪಿಸಿಸಿ ಕಚೇರಿಯಲ್ಲಿಂದು ಕಾಂಗ್ರೆಸ್ ಸಚಿವರ ತುರ್ತು ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಬಹುತೇಕ ಸಚಿವರು ಪಾಲ್ಗೊಂಡಿದ್ದು, ಸಿದ್ದರಾಮಯ್ಯನವರ ನಡೆ ಕುರಿತು ಬೇಸರ ವ್ಯಕ್ತಪಡಿಸಿರುವ ಪರಮೇಶ್ವರ್, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಎಲ್ಲ ರೀತಿಯ ಬೆಂಬಲ ನೀಡಿತ್ತು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಜೆಡಿಎಸ್ ಮೈತ್ರಿ ಅನಿವಾರ್ಯವಾಗಿದೆ. ಈ ವೇಳೆ ಸಿದ್ದರಾಮಯ್ಯನವರು ಮೈತ್ರಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಹೈಕಮಾಂಡ್ ಗೆ ಇರುಸುಮುರುಸು ಉಂಟು ಮಾಡುತ್ತಿದ್ದಾರೆಂದು ಹೇಳಿದರೆಂದು ತಿಳಿದುಬಂದಿದೆ. ಮೈತ್ರಿಕೂಟ ಸರ್ಕಾರದ ಸಚಿವರು ಸಿದ್ದರಾಮಯ್ಯನವರ ಹೇಳಿಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಬಾರದೆಂದು ಪರಮೇಶ್ವರ್ ಸೂಚನೆ ನೀಡಿದ್ದಾರೆಂದು ಹೇಳಲಾಗಿದೆ. ಈಗಾಗಲೇ ಸಿದ್ದರಾಮಯ್ಯನವರ ಹೇಳಿಕೆಯಿಂದಾಗಿ ಸಾಕಷ್ಟು ಡ್ಯಾಮೇಜ್ ಆಗಿದ್ದು, ಇದು ಇನ್ನಷ್ಟು ಮುಂದುವರೆದರೆ ಲಾಭ ಪಡೆದುಕೊಳ್ಳಲು ಬಿಜೆಪಿ ಯತ್ನಿಸಬಹುದೆಂಬ ಎಚ್ಚರಿಕೆಯನ್ನೂ ಪರಮೇಶ್ವರ್ ನೀಡಿದ್ದಾರೆಂದು ಹೇಳಲಾಗಿದೆ.
Comments