ಸಿದ್ದರಾಮಯ್ಯ ಎದುರು ಎಂ.ಬಿ ಪಾಟೀಲ್ ಅತ್ತಿದ್ದೇಕೆ?

ಸಚಿವ ಸಂಪುಟದಲ್ಲಿ ಅವಕಾಶ ನೀಡದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್ ಗಳಗಳನೆ ಅತ್ತ ಘಟನೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದಿದೆ.
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಮುಂದುವರೆದಿದೆ. ಎಂ.ಬಿ ಪಾಟೀಲ್ ನಿವಾಸದಲ್ಲಿ ಪ್ರಮುಖರ ಸಭೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಎಂ ಬಿ ಪಾಟೀಲ್ ಕಣ್ಣೀರು ಹಾಕಿದ್ದಾರೆ. ಪಟ್ಟಿಯಲ್ಲಿ ಹೆಸರಿದ್ದರೂ ಕೊನೆಯ ಘಳಿಗೆಯಲ್ಲಿ ಯಾಕೆ ಕೈಬಿಟ್ಟಿದ್ದಾರೆ, ಸಮಾಜಕ್ಕಾಗಿ, ಪಕ್ಷಕ್ಕಾಗಿ ನಾನು ಶ್ರಮಿಸಿದ್ದೇನೆ, ನನ್ನನ್ನು ಪಕ್ಷ ಕಡೆಗಣಿಸಿದ್ದು ಎಷ್ಟು ಸರಿ ಎಂದು ಭಾವೋದ್ವೇಗಕ್ಕೆ ಒಳಗಾಗಿ ಅಳುತ್ತಲೇ ಕಾವೇರಿಯಿಂದ ಎಂ ಬಿ ಪಾಟೀಲ್ ತೆರಳಿದ್ದಾರೆ. ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಮೊದಲ ಹಂತದಲ್ಲಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಆದ್ದರಿಂದ, ಅವರು ಅಸಮಾಧಾನಗೊಂಡಿದ್ದಾರೆ. ಮಾಜಿ ಸಚಿವರ ಬೆಂಬಲಿಗರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು.
Comments