ಕಾಂಗ್ರೆಸ್ ನ ನಾಲ್ಕು ಎಂಎಲ್‌ಸಿ ಸ್ಥಾನ ಫೈನಲ್ ಆಯ್ತು…ಅಚ್ಚರಿ ಮೂಡಿಸಿದ ಹೈಕಮಾಂಡ್ ನ ಈ ಆಯ್ಕೆ..!!

ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವೇಳೆ ಹೊಸ ಮುಖಗಳಿಗೆ ಪ್ರಾಶಸ್ತ್ಯ ನೀಡಿ ಅಚ್ಚರಿ ಹುಟ್ಟಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಇದೇ ಮಾದರಿಯನ್ನು ವಿಧಾನಪರಿಷತ್ ಚುನಾವಣೆಗೂ ಅನುಸರಿಸಿದ್ದು, ಇಬ್ಬರು ಹೊಸಬರಿಗೆ ಅವಕಾಶ ನೀಡಿದೆ.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ತನ್ನ ಸಂಖ್ಯಾಬಲ ಆಧರಿಸಿ ಸುಲಭವಾಗಿ ಗೆಲ್ಲಲು ಸಾಧ್ಯವಿರುವ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೈಕಮಾಂಡ್ ನಾಮಪತ್ರ ಸಲ್ಲಿಸುವ ಮುನ್ನಾ ಪ್ರಕಟಿಸಿದ್ದು, ಬೀದರ್‌ನ ಅರವಿಂದ ಅರಳಿ ಮತ್ತು ಮಂಗಳೂರಿನ ಕೆ.ಹರೀಶ್ ಕುಮಾರ್ ಎಂಬ ಅಚ್ಚರಿಯ ಹೆಸರುಗಳನ್ನು ಆಯ್ಕೆ ಮಾಡಿದೆ. ಉಳಿದ ಇನ್ನೆರಡು ಸ್ಥಾನಗಳಿಗೆ ನಿರೀಕ್ಷೆಯಂತೆಯೇ ಕಳೆದ ಬಾರಿಯೂ ವಿಧಾನಪರಿಷತ್ ಸದಸ್ಯರಾಗಿದ್ದ ಕೆ.ಗೋವಿಂದರಾಜು ಮತ್ತು ಸಿ.ಎಂ.ಇಬ್ರಾಹಿಂ ಅವರಿಗೆ ಮತ್ತೊಂದು ಅವಧಿಗೆ ಅವಕಾಶ ದೊರಕಿದೆ ಎನ್ನಲಾಗಿದೆ. ಆಯ್ಕೆಯಾಗಿರುವ ಈ ನಾಲ್ಕು ಮಂದಿ ಪೈಕಿ ಕೆ.ಗೋವಿಂದರಾಜು ಹಾಗೂ ಸಿ.ಎಂ.ಇಬ್ರಾಹಿಂ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲಾಬಿ ನಡೆಸಿದ್ದರು. ವಿಧಾನಪರಿಷತ್ ಸದಸ್ಯರಾಗಿ 6 ತಿಂಗಳು ಮಾತ್ರ ಪೂರ್ಣಗೊಳಿಸಿದ್ದ ಸಿ.ಎಂ.ಇಬ್ರಾಹಿಂ ಅವರಿಗೆ ಪೂರ್ಣಾವಧಿ ಅವಕಾಶ ನೀಡಬೇಕು ಎಂದು ಮರು ಆಯ್ಕೆ ಮಾಡಲಾಗಿದೆ. ಕೆ.ಗೋವಿಂದರಾಜು ಅವರು ಹೈಕಮಾಂಡ್‌ನಲ್ಲೂ ಪ್ರಭಾವ ಹೊಂದಿದ್ದು, ಸಿದ್ದರಾಮಯ್ಯ ಕೂಡ ಲಾಬಿ ನಡೆಸಿದ್ದರಿಂದ ಮತ್ತೊಮ್ಮೆ ಆಯ್ಕೆಯಾಗುವುದು ಸುಲಭವಾಗಿದೆ. ಆದರೆ, ಉಳಿದ ಎರಡು ಸ್ಥಾನಗಳಿಗೆ ಅಚ್ಚರಿಯ ಆಯ್ಕೆಯಾಗಿದೆ. ಹಿಂದುಳಿದ ವರ್ಗಗಳಿಂದ ಬಿಲ್ಲವ ಸಮಾಜದವರಾದ ಮಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಹರೀಶ್ ಕುಮಾರ್ ಅವರ ಆಯ್ಕೆಯ ಹಿಂದೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ಇನ್ನು ಪರಿಶಿಷ್ಟರ ಕೋಟಾದಲ್ಲಿ ಬೀದರ್ ನವರಾದ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಅರವಿಂದಕುಮಾರ್ ಅರಳಿ ಅವರು ಅವಕಾಶ ಪಡೆದಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಅರವಿಂದಕುಮಾರ್ ಪರ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಮಾತು ನಡೆದಂತೆ ಕಾಣುತ್ತಿಲ್ಲ. ಆದರೆ, ರಾಜ್ಯಸಭೆ ಆಯ್ಕೆ ವೇಳೆ ಸಿದ್ದರಾಮಯ್ಯ ಸೂಚಿಸಿದವರಿಗೆ ಸ್ಥಾನ ದೊರಕಿರಲಿಲ್ಲ. ಆಗ ಪರಮೇಶ್ವರ್ ಅವರು ತಮ್ಮ ಆಪ್ತ ಜೆ.ಸಿ.ಚಂದ್ರಶೇಖರ್ ಅವರಿಗೆ ರಾಜ್ಯಸಭೆ ಸ್ಥಾನ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.
Comments