ಕರ್ನಾಟಕದಲ್ಲಿ ಅಮಿತ್ ಶಾ ಚಾಣಕ್ಯತೆ ಫೇಲ್, ಭಾರೀ ಮುಖಭಂಗ...!!

ಕರ್ನಾಟಕ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಲು ಬಿಜೆಪಿ ವಿಫಲವಾಗಿರುವುದು ಪಕ್ಷದಲ್ಲಿ ಆಂತರಿಕವಾಗಿ ಯಾವ ಪರಿಣಾಮವು ಬೀರದು; ಆದರೆ ಈ ಹಿನ್ನಡೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕಳೆದ ಮೂರು ವರ್ಷಗಳಿಂದ ಪಡೆದ ವರ್ಚಸ್ಸನ್ನು ಮಂಕಾಗಿಸಲಿದೆ ಎಂಬ ಅಭಿಮತವನ್ನು ಹಿರಿಯ ಮುಖಂಡರು ಮತ್ತು ರಾಜಕೀಯ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.
ಆಧುನಿಕ ಚಾಣಕ್ಯ ಎಂದೇ ಕರೆಸಿಕೊಂಡಿರುವ ಶಾ ವ್ಯತಿರಿಕ್ತ ರಾಜಕೀಯ ಸಮರವನ್ನೂ ಜಯಿಸಬಲ್ಲವರು ಎನ್ನುವುದು ಗೊವಾ ಹಾಗೂ ಮಣಿಪುರ ಚುನಾವಣೆಗಳಿಂದ ಸಾಬೀತಾಗಿದೆ. ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ, ಅಧಿಕಾರ ಹಿಡಿಯಲು ವಿಫಲ ಯತ್ನ ನಡೆಸಿರುವುದು ಶಾ ಹಾಗೂ ಪಕ್ಷದ ಮೇಲೆ ಪರಿಣಾಮ ಬೀರಲಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು ಹೇಳಿದರು. ಮೊದಲನೆಯದಾಗಿ ಬಿಜೆಪಿ ಹಾಗೂ ಶಾ ಅವರ ನಾಗಾಲೋಟಕ್ಕೆ ತಡೆಯೊಡ್ಡಬಹುದು ಎಂಬ ವಿಶ್ವಾಸ ವಿರೋಧ ಪಕ್ಷಗಳಲ್ಲಿ ವೃದ್ಧಿಸಿದೆ. ಬಿಜೆಪಿ ವಿರುದ್ಧ 2019ರ ಚುನಾವಣೆಯಲ್ಲಿ ಫೆಡರಲ್ ಫ್ರಂಟ್ ಸಂಘಟಿಸುವ ಕಾರ್ಯಕ್ಕೂ ಇದು ವೇಗ ನೀಡಲಿದೆ. ಈ ವರ್ಷ ಶಾ ಅಧಿಕಾರಾವಧಿ ಮುಗಿಯಲಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆವರೆಗಾದರೂ ಶಾ ಅದೇ ಹುದ್ದೆಯಲ್ಲಿ ಮುಂದುವರಿಯಬೇಕು. ಇದಕ್ಕಾಗಿ ಪಕ್ಷದಲ್ಲಿ ಸಂಪೂರ್ಣ ನಿಯಂತ್ರಣ ಉಳಿಸಿಕೊಳ್ಳಬೇಕಾದ್ದು ಅನಿವಾರ್ಯ. ಎಷ್ಟೇ ಸಂಖ್ಯಾಬಲ ಇದ್ದರೂ ಶಾ ತಮ್ಮ ಪಕ್ಷದ ಸರ್ಕಾರ ರಚಿಸಬಲ್ಲರು ಎಂಬ ಮಾನಸಿಕ ಸ್ಥಿತಿ ಕರ್ನಾಟಕ ವೈಫಲ್ಯದ ಬಳಿಕ ಉಳಿದಿಲ್ಲ ಎಂದು ಬಿಜೆಪಿ ಮುಖಂಡರು ವಿವರಿಸಿದರು.
Comments