ಮತ ಚಲಾಯಿಸಿದ ಸ್ಯಾಂಡಲ್ ವುಡ್ ಸ್ಟಾರ್ ಗಳು
ಮತದಾನ ಮಾಡುವುದು ಅಮೂಲ್ಯವಾದ ಕೆಲಸ. ರಾಜ್ಯದ ಅಭಿವೃದ್ಧಿಗಾಗಿ ಎಲ್ಲರೂ ಮತದಾನ ಮಾಡಲೇ ಬೇಕು ಎಂದು ಈಗಾಗಲೇ ರಾಜ್ಯದ ಎಲ್ಲಾ ಕಡೆಗಳಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಕನ್ನಡ ಸಿನಿಮಾರಂಗದ ಸ್ಟಾರ್ ಗಳೆಲ್ಲರೂ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಮಾಜಿ ಸಚಿವ ಅಂಬರೀಶ್ ತಮ್ಮ ಹುಟ್ಟೂರು ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯ ಮತಗಟ್ಟೆ ಸಂಖ್ಯೆ 164ರಲ್ಲಿ ಮತ ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ತಮ್ಮಣ್ಣ ಜೊತೆ ಅಂಬರೀಶ್ ಆಗಮಿಸಿದ್ದು ವಿಶೇಷವಾಗಿತ್ತು. ಈ ವೇಳೆ ಅಭಿಮಾನಿಗಳು ಅಂಬಿ ಪರ ಜೈಕಾರ ಮೊಳಗಿಸಿದರು. ಈ ವೇಳೆ ಅಭಿಮಾನಿಗಳ ಪ್ರೀತಿ ಕಂಡು ರೆಬೆಲ್ ಸ್ಟಾರ್ ಭಾವುಕರಾದರು.
ಸದಾಶಿವನಗರದಲ್ಲಿ ಪತ್ನಿ ಜೊತೆಯಾಗಿ ಮತದಾನ ಮಾಡಿದ ನಂತರ ಮಾತನಾಡಿದ ಪವರ್ ಸ್ಟಾರ್ , "ಸಂಜೆ 6.30 ತನಕ ವೋಟ್ ಮಾಡಲು ಅವಕಾಶ ಇದೆ. 18 ವರ್ಷದಿಂದ ಮತದಾನಮಾಡುತ್ತಾ ಬಂದಿದ್ದೇನೆ. ಇಲ್ಲಿಯ ತನಕ ಒಂದು ಚುನಾವಣೆಯಲ್ಲಿ ಮಾತ್ರ ಮತದಾನ ಮಾಡಲು ಸಾಧ್ಯವಾಗಲಿಲ್ಲ. 18 ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ. ರಾಜ್ಯದ ಅಭಿವೃದ್ದಿಗೆ ಪ್ರತಿ ವೋಟ್ ಕೂಡ ಅಮೂಲ್ಯ, ನೀವು ಎಲ್ಲೆ ಇದ್ದರು ತಪ್ಪದೆ ಮತ ಹಾಕಿ". ಎಂದಿದ್ದಾರೆ.
ಕ್ರೇಜಿ ಸ್ಟಾರ್ ತಮ್ಮ ಪತ್ನಿಯ ಜೊತೆಗೆ ರಾಜಾಜಿನಗರದಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು ''ಎಲ್ಲರೂ ಮತದಾನ ಮಾಡಬೇಕು. ನಮ್ಮ ಹಣೆಬರಹ ಚೆನ್ನಾಗಿರಬೇಕು ಅಂದರೆ ಯಾವ ಹಣೆ ಮೇಲೆ ಮತ ಒತ್ತುತ್ತೇವೆ ಎನ್ನುವುದು ಬಹಳ ಮುಖ್ಯ. ಮತದಾನ ಕಡ್ಡಾಯ ಆಗಬೇಕು'' ಎಂದು ಹೇಳಿದರು.
"ನನ್ನ ಹಕ್ಕನ್ನೂ ನಾನು ಚಲಾಯಿಸಿದ್ದೇನೆ. ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ. ನಮ್ಮ ನಾಯಕರನ್ನುಆಯ್ಕೆ ಮಾಡುವ ಕ್ಷಣ. ಎಲ್ಲರು ಮತ ಚಾಲಾಯಿಸಿ. ಎಂದು ವೋಟ್ ಮಾಡಿ ಸಂದೇಶ ಸಾರಿದ್ದಾರೆ" ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್.
ನಟ ರಮೇಶ್ ಅರವಿಂದ್ ಇಂದು ಬೆಳ್ಳಗೆಯೇ ಪದ್ಮನಾಭನಗರದಲ್ಲಿ ಮತ ಚಲಾವಣೆ ಮಾಡಿದರು. ತಮ್ಮ ಪತ್ನಿ ಅರ್ಚನಾ ಮತ್ತು ಮಗಳ ನಿಹಾರಿಕ ಜೊತೆಗೆ ರಮೇಶ್ ವೋಟ್ ಹಾಕಿದ್ದರು. ವಿಶೇಷ ಅಂದರೆ ರಮೇಶ್ ಪುತ್ರಿ ನಿಹಾರಿಕ ಅವರು ಮೊದಲ ಬಾರಿಗೆ ಮತದಾನ ಮಾಡಿದ್ದಾರೆ.
ಜಗ್ಗೇಶ್ ತಮ್ಮ ಪತ್ನಿ ಪರಿಮಳ ಹಾಗೂ ಇಬ್ಬರು ಮಕ್ಕಳ ಜೊತೆಗೆ ವೋಟ್ ಹಾಕಿದ್ದಾರೆ. ಮಲ್ಲೇಶ್ವರಂ ನಲ್ಲಿ ಜಗ್ಗೇಶ್ ಮತದಾನ ಮಾಡಿದ್ದು, ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜಗ್ಗೇಶ್ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೂಡ ಆಗಿದ್ದಾರೆ.
ಹಿರಿಯ ನಟಿ ಡಾ.ಲೀಲಾವತಿ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ಮತ ಹಾಕಲು ಬೆಳ್ಳಗೆಯೇ ಬಂದರು. ಆದರೆ ಅಲ್ಲಿ ಮತಗಟ್ಟೆ ಸಂಖೈ 107ರ ಮತಯಂತ್ರ ದೋಷದಿಂದ ಮತಹಾಕಲು ಬಂದ ಅವರ ಕೆಲ ಕಾಲ ಕಾಯಬೇಕಾಯಿತು. ಈ ವೇಳೆ ತಾಯಿ ಜೊತೆಗೆ ನಟ ವಿನೋದ್ ರಾಜ್ ಕೂಡ ಇದ್ದರು.
ಮತ್ತೊಬ್ಬ ಹಿರಿಯ ನಟಿ ಜಯಮಾಲ ರಾಧಾಕೃಷ್ಣ ವಾರ್ಡ್ ನಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ಅವರ ''ನಾಗರೀಕರು ಮೊದಲು ಮನೆಯಿಂದ ಹೊರಬಂದು ಮತದಾನ ಮಾಡಬೇಕು. ನಾನು ಮಹಿಳೆಯರ ಪ್ರತ್ಯೇಕ ಪಿಂಕ್ ಮತಗಟ್ಟೆಯನ್ನು ವಿರೋಧಿಸುವುದಿಲ್ಲ. ವೈಯಕ್ತಿಕವಾಗಿ ಸಮಾನತೆ ಬಯಸುವುದರಿಂದ ಮಹಿಳೆಯರಿಗೆ ಪ್ರತ್ಯೇಕ ಮತಗಟ್ಟೆ ಬೇಕಿಲ್ಲ..ಎಲೆಕ್ಟ್ರಾನಿಕ್ ಮತಯಂತ್ರಗಳ ಬಗ್ಗೆ ಈಗಲೂ ನನಗೆ ವಿಶ್ವಾಸವಿಲ್ಲ.'' ಎಂದರು.
ಬಹು ಭಾಷಾ ನಟಿ ಬಿ.ಸರೋಜಾದೇವಿ ಮಲ್ಲೇಶ್ವರಂನ ಬಿ.ಪಿ.ಇಂಡಿಯನ್ ಸ್ಕೂಲ್ ನಲ್ಲಿ ಮತದಾನ ಮಾಡಿದರು.
ಸ್ಟೈಲಿಶ್ ಡೈರೆಕ್ಟರ್ ಎಂದು ಜನಪ್ರಿಯರಾಗಿರುವ ಇಂದ್ರಜೀತ್ ಲಂಕೇಶ್ ಬಿಟಿಎಂ ಲೇ ಔಟ್ ನಲ್ಲಿ ಮತ ಹಾಕಿದರು.
ಹಿರಿಯ ನಟ ಸುಧೀರ್ ಪುತ್ರ, ನಿರ್ದೇಶಕ ತರುಣ್ ಸುಧೀರ್ ರಾಜಾಜಿ ನಗರದ ವಾರ್ಡ್ ನಂ 17 ರಲ್ಲಿ ವೋಟ್ ಹಾಕಿದರು.
Comments