ಕ್ಷಮೆಯಾಚಿಸಿದ ಬಿ ಎಸ್ ಯಡಿಯೂರಪ್ಪ- ವಿಜಯೇಂದ್ರ ವರುಣಾ ಕ್ಷೇತ್ರದಿಂದ ಹಿಂದೆ ಸರಿದ್ರಾ?

ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕೊನೆಗೂ ವರುಣಾ ಕ್ಷೇತ್ರದಲ್ಲಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಸ್ಪರ್ಧಿಸುತ್ತಿಲ್ಲ ಎನ್ನುವುದು ಖಚಿತವಾಗಿದೆ. ಮಂಗಳವಾರ ಖುದ್ದು ಯಡಿಯೂರಪ್ಪ ಅವರೇ ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿ ಕ್ಷಮೆಯನ್ನೂ ಕೂಡ ಯಾಚಿಸಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಪ್ರಕಾಶ್ ಜಾವ್ಡೇಕರ್ ಮತ್ತು ಮುರಳೀಧರ ರಾವ್ ಅವರೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ ಮೈಸೂರು ಮತ್ತು ಚಾಮರಾಜನಗರದ ಎಲ್ಲಾ ಬಿಜೆಪಿ ಅಭ್ಯರ್ಥಿಗಳೊಂದಿಗೆ ಸಮಲೋಚನೆಯನ್ನು ನಡೆಸಿದ್ದೇವೆ. ವಿಜಯೇಂದ್ರ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ವಿಜಯೇಂದ್ರ ಎಲ್ಲಾ ಕ್ಷೇತ್ರಗಳಲ್ಲಿ 20 ದಿನಗಳ ಕಾಲ ಪ್ರವಾಸ ಮಾಡಿ ಪ್ರಚಾರ ನಡೆಸಲಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದರು ಬಿಎಸ್ ಯಡಿಯೂರಪ್ಪ ತಿಳಿಸಿದರು. ವಿಜಯೇಂದ್ರ ಅವರಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಯಾವೊಬ್ಬ ಕಾರ್ಯಕರ್ತರು ಕೂಡ ತಪ್ಪು ತಿಳುವಳಿಕೆ ಮಾಡಬಾರದು. ವರುಣಾದಲ್ಲಿ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಅವರ ಪರ ಶಾಂತಿಯಿಂದ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿಯನ್ನು ಕೂಡ ಮಾಡಿದರು. ವಿಜಯೇಂದ್ರ ಅವರಿಗೆ ಕೊನೇ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಸೂಚಿಸಲಾಗಿದ್ದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಆಕ್ರೋಶಗೊಂಡಿದ್ದ ಕಾರ್ಯಕರ್ತರು ರೊಚ್ಚಿಗೆದ್ದಿದ್ದರು. ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಕೂಡ ಮೂಡಿದೆ.
Comments