ಜನರ ಪರವಾಗಿ ಕೆಲಸ ಮಾಡಿ ಎಂದ ಎಚ್ ಡಿ ಕೆ

ಚುನಾವಣಾ ಅಧಿಕಾರಿಗಳ ವಿರುದ್ದ ಗರಂ ಆಗಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ನೀವು ಸರ್ಕಾರದ ಗುಲಾಮರಾಗಿ ಕೆಲಸ ಮಾಡಬೇಡಿ. ಬದಲಾಗಿ 6.5 ಕೋಟಿ ಜನರ ಪರ ಕೆಲಸ ಮಾಡಿ ಎಂದು ಖಾರವಾಗಿ ಸಲಹೆ ನೀಡಿದ್ದಾರೆ. ಕೊಪ್ಪಳದಲ್ಲಿ ಮಂಗಳವಾರ ನಡೆದ ವಿಕಾಸಪರ್ವ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಚುನಾವಣಾ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಿಟರ್ನಿಂಗ್ ಆಫಿಸರ್ ಗಳು ನಮಗೆ ತೊಂದರೆ ಕೊಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ತಾವರಗೇರಾ ಸಮೀಪದಲ್ಲಿ ನಮ್ಮ ವಾಹನ ಸೀಜ್ ಮಾಡಿದ್ದಾರೆ. ಚಾಲಕರಿಗೆ ಕೊಟ್ಟ ಸಂಬಳ ಹಣವಿದ್ದ ಕಾರಣಕ್ಕೆ ವಾಹನ್ ಸೀಜ್ ಮಾಡಿದ್ದಾರೆ. ಜತೆಗೆ ಕೂಡ್ಲಗಿ ಬಳಿ ಸಮಾವೇಶ ನಡೆಸಲು ಅನುಮತಿ ನೀಡುತ್ತಿಲ್ಲ. ಇದ್ಯಾವ ಸೀಮೆ ಚುನಾವಣಾ ಆಯೋಗ ಎಂದು ಕಿಡಿಕಾರಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಬರೀ ದೌರ್ಭಾಗ್ಯಗಳನ್ನೇ ನೀಡಿದ್ದಾರೆ. ಅದನ್ನ ನಾನು ಸರಿಪಡಿಸುತ್ತೇನೆ, ಸಾಲಮನ್ನಾ ಹೆಸರಿನಲ್ಲಿ ರೈತರಿಗೆ ಸಿದ್ದರಾಮಯ್ಯನವರು ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 120 ಸ್ಥಾನಗಳಿಸುವ ಮೂಲಕ ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಈಗಾಗಲೇ ನಾನು ಘೋಷಿಸಿರುವಂತೆ ಮಾತಿಗೆ ಬದ್ಧನಾಗಿರುತ್ತೇನೆ. ಈ ಹಿನ್ನೆಲೆಯಲ್ಲಿ ರಾಜ್ಯದ ರೈತಾಪಿವರ್ಗ ಜೆಡಿಎಸ್ ಗೆ ಬಹುದೊಡ್ಡ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Comments