ಕರ್ನಾಟಕ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ನಕಲಿ ಎಂದ ಕಾಂಗ್ರೆಸ್...!!

ಎಐಸಿಸಿಯ ಹೆಸರಿನಲ್ಲಿ ಕಾಂಗ್ರೆಸ್‌ನ ಸುಮಾರು 131 ಅಭ್ಯರ್ಥಿಗಳ ಹೆಸರಿನ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಮಗ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ರಾಷ್ಟ್ರೀಯ ಮುಖಂಡರು ಅಂತಿಮಗೊಳಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಸುದ್ದಿ ವ್ಯಾಪಕ ಪ್ರಚಾರ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಯಾವುದೇ ಅಭ್ಯರ್ಥಿಗಳ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ. ಅದು ಸುಳ್ಳುಪಟ್ಟಿ ಎಂದು ರಾತ್ರಿ ಟ್ವೀಟ್ ಮಾಡಿದ್ದಾರೆ. ನಮ್ಮಲ್ಲಿ ಗೊಂದಲಗಳನ್ನು ಸೃಷ್ಟಿಸುವ ಸಲುವಾಗಿಯೇ ಈ ರೀತಿ ಸುಳ್ಳು ಪಟ್ಟಿ ಹರಿಬಿಡಲಾಗಿದೆ. 'ಫೇಕ್ ನ್ಯೂಸ್' ಫ್ಯಾಕ್ಟರಿಯ ಉತ್ಪನ್ನಗಳನ್ನು ಉತ್ತೇಜಿಸಬೇಡಿ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಬಿಜೆಪಿಯತ್ತ ಹರಿಹಾಯ್ದಿದ್ದರು. ಅಭ್ಯರ್ಥಿಗಳ ಪಟ್ಟಿಯ ಗೊಂದಲಕ್ಕೆ ಸಂಬಂಧಿಸಿದಂತೆ ಎಐಸಿಸಿ ಕೂಡ ಟ್ವಿಟ್ಟರ್ ಸ್ಪಷ್ಟೀಕರಣ ನೀಡಿದ್ದು, ಅಂತೆಕಂತೆಗಳಿಗೆ ತೆರೆ ಎಳೆದಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಪಟ್ಟಿ ಇರುವ ಸುಳ್ಳು ಪತ್ರಿಕಾ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಅದು ಸುಳ್ಳು ಪ್ರಕಟಣೆಯಾಗಿದ್ದು, ಎಐಸಿಸಿ ಯಾವುದೇ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಸದ್ಯ ಸ್ಕ್ರೀನಿಂಗ್ ಕಮಿಟಿಯ ಮೀಟಿಂಗ್‌ಗಳು ನಡೆಯುತ್ತಿದ್ದು, ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸಭೆಯ ಬಳಿಕವೇ ಪಟ್ಟಿ ಬಿಡುಗಡೆಯಾಗಲಿದೆ. ಇಲ್ಲಿಯವರೆಗೂ ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧ ಯಾವುದೇ ಸಿಇಸಿ ಸಭೆ ನಡೆದಿಲ್ಲ ಎಂದು ವಿವರಣೆ ನೀಡಿದೆ.
Comments