ಕೈ ಹಿಡಿಯಲು ಮುಂದಾಗಿರುವ ನೈಸ್ ಕಂಪೆನಿ ಮುಖ್ಯಸ್ಥ
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳು ಕಂಡು ಬರುತ್ತಿದ್ದು, ಭಾರಿ ಕುತೂಹಲ ಕೆರಳಿಸಿದೆ. ಇಷ್ಟಲ್ಲದೆ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರವೂ ಜೋರಾಗಿದೆ, ಇನ್ನೊಂದೆಡೆ ಪಕ್ಷದಿಂದ ಪಕ್ಷಕ್ಕೆ ಹಾರುವವರ ಸಂಖ್ಯೆಯು ಸಹ ದಿನೇದಿನೇ ಹೆಚ್ಚಾಗುತ್ತಿದೆ.
ಅದರದೇ ಒಂದು ಭಾಗವಾಗಿ ಬೀದರ್ ಶಾಸಕ, ನೈಸ್ ಕಂಪೆನಿ(Nandi Infrastructure Corridor Enterprises) ಮುಖ್ಯಸ್ಥ ಅಶೋಕ್ ಖೇಣಿ ಇಂದು(ಮಾ.05) ಕಾಂಗ್ರೆಸ್ ಸೇರಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಖೇಣಿ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲಿದ್ದಾರೆ. ಆದರೆ ಖೇಣಿ ಸೇರ್ಪಡೆಯ ಕುರಿತು ಹಲವು ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.
ಖೇಣಿಯವರೇ ಸ್ಥಾಪಿಸಿದ್ದ ಕರ್ನಾಟಕ ಮಕ್ಕಳ ಪಕ್ಷ ಕಾಂಗ್ರೆಸ್ ನೊಂದಿಗೆ ವಿಲೀನವಾಗಲಿದೆ. 2013 ರ ವಿಧಾನಸಭೆ ಚುನಾವಣೆಗೂ ಮುನ್ನ ಸ್ಥಾಪಿಸಲಾಗಿದ್ದ ಈ ಪಕ್ಷದಿಂದ ಬೀದರ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಖೇಣಿ, ಗೆಲುವು ಸಾಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಇದೀಗ ಇವರು ಕಾಂಗ್ರೆಸ್ ಸೇರ್ಪಡೆಯಾದರೆ ಬೀದರ್ ದಕ್ಷಿಣ ಕ್ಷೇತ್ರದಿಂದ ಟಿಕೇಟ್ ಸಿಗುವುದು ಅನುಮಾನ. ಮಾಜಿ ಮುಖ್ಯಮಂತ್ರಿ ದಿ. ಧರಂ ಸಿಂಗ್ ಅವರ ಅಳಿಯ ಚಂದ್ರ ಸಿಂಗ್ ಅವರು ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟ್ ಬಯಸುತ್ತಿರುವುದರಿಂದ ಖೇಣಿ ಹಾದಿ ಸುಲಭವಿಲ್ಲ.
Comments