ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ದುಡ್ಡು ಬಿತ್ತಿ ಬೆಳೆಯುವ ಮನಸ್ಥಿತಿ ಯಲ್ಲಿದ್ದಾರೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾಂಟ್ರ್ಯಾಕ್ಟರ್ ಓರಿಯೆಂಟೆಡ್ ಗೌರ್ನಮೆಂಟ್ ಆಗಿದೆ ಎಂದು ಕಿಡಿಕಾರಿದರು. ಪೊಲೀಸ್ ಇಲಾಖೆ, ಪಿಡಬ್ಲ್ಯುಡಿ, ಆರ್ ಟಿಒ ಇಲಾಖೆಗಳಲ್ಲಿ ಹಣ ನೀಡದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ದೂರಿದರು. ಸಿದ್ದರಾಮಯ್ಯ ಜತೆ ಯಾವ ಕುರುಬರೂ ಇಲ್ಲ. ಅವರನ್ನು ನಂಬಿದವರ್ಯಾರೂ ಈಗ ಅವರ ಜತೆಯಲ್ಲಿಲ್ಲ. ಕೆಂಪಯ್ಯನಂತಹವರು ಮಾತ್ರ ಇದ್ದಾರೆ ಎಂದು ಗೇಲಿ ಮಾಡಿದರು.
ದೇವೇಗೌಡರು ತಮ್ಮನ್ನು ಬೆಳೆಸಲಿಲ್ಲ ಎಂದು ಹೇಳುವ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆಯೇ ಇಲ್ಲ. ಕೃತಜ್ಞತೆ ಇಲ್ಲದವರು ನಿಜವಾದ ರಾಜಕಾರಣಿಯೂ ಅಲ್ಲ, ಜನನಾಯಕನೂ ಅಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ದೇವೇಗೌಡರು ಇಲ್ಲದೆ ಇವರು ಡಿಸಿಎಂ ಆಗಿದ್ದರಾ? ಹಣಕಾಸು ಸಚಿವರಾಗಿದ್ದರಾ?ಎಲ್ಲ ಅಧಿಕಾರ ಅನುಭವಿಸಿ ಈಗ ದೇವೇಗೌಡ್ರು ಏನೂ ಮಾಡಲಿಲ್ಲ. ತಮ್ಮನ್ನು ಬೆಳೆಸಲಿಲ್ಲ ಎಂದು ಹೇಳುವುದು ಎಷ್ಟು ಸರಿ. ಇವರು ಕೃತಜ್ಞತೆ ಇಲ್ಲದ ಜನ ಎಂದು ವಿಶ್ವನಾಥ್ ಟೀಕಿಸಿದರು.ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಂದ ಹಿಡಿದು ಯಾರೊಬ್ಬರಿಗೂ ಬೆಲೆ ಇಲ್ಲ. ಈ ಇಲಾಖೆಯನ್ನು ಬೇರೊಬ್ಬರು ನಡೆಸುತ್ತಿದ್ದಾರೆ. ಗೃಹ ಸಚಿವರ ಮಾತಿಗೂ ಬೆಲೆ ಇಲ್ಲ ಎಂದು ಲೇವಡಿ ಮಾಡಿದರು. ಯಾವುದೇ ಸರ್ಕಾರದಲ್ಲಿ ಸಬ್‍ಇನ್ಸ್ ಪೆಕ್ಟರ್, ತಹಶೀಲ್ದಾರ್ ಸರ್ಕಾರದ ಅಧಿಕಾರಿಯಾಗಿರಬೇಕು. ಅವರು ಯಾವತ್ತೂ ಶಾಸಕನ ಅಧಿಕಾರಿಯಾಗಿರಬಾರದು. ಹೀಗೇನಾದರೂ ಆದರೆ ಇಡೀ ವ್ಯವಸ್ಥೆ ಹಾಳಾಗುತ್ತದೆ. ಯಾರಿಗೂ ರಕ್ಷಣೆ ಇಲ್ಲದಂತಾಗುತ್ತದೆ ಎಂದು ಹೇಳಿದರು.ಹದಿಮೂರು ಬಾರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ. ತಾನೊಬ್ಬನೇ ಬುದ್ಧಿವಂತ ಎಂದುಕೊಂಡಿದ್ದಾರೆ. ಜನರೆಲ್ಲ ಕುರಿಗಳು ಎಂದು ತಿಳಿದಿದ್ದಾರೆಯೇ ಎಂದು ಪ್ರಶ್ನಿಸಿದ ವಿಶ್ವನಾಥ್, 100 ಪಬ್ಲಿಕ್ ಶಾಲೆ ತೆರೆಯುವುದಾಗಿ ಹೇಳಿದ್ದಾರೆ. 5 ಲಕ್ಷದಲ್ಲಿ ಒಂದು ಶಾಲಾ ಕಟ್ಟಡ ಕಟ್ಟಲು ಆಗಲ್ಲ. ಅಗತ್ಯ ಸೌಲಭ್ಯ ಕೊಡಲಾಗುವುದಿಲ್ಲ. ಇನ್ನು ಹೇಗೆ 100 ಪಬ್ಲಿಕ್ ಶಾಲೆ ತೆರೆಯುತ್ತಾರೆ. ಇದೇ ಇವರ ಆಡಳಿತ ವೈಖರಿ ಎಂದು ಗುಡುಗಿದರು.
Comments