ಇಂದು ಪಕ್ಷದ ಹೆಸರು ಘೋಷಣೆ ಮಾಡಲಿರುವ ಕಮಲ್ ಹಾಸನ್
ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ಇದೀಗ ತಮ್ಮ ಪಕ್ಷದ ಹೆಸರು ಘೋಷಣೆ ಪ್ರಚಾರ ಕಾರ್ಯದತ್ತ ಮುಖಮಾಡಿದ್ದಾರೆ. ರಾಮನಾಥಪುರಂನಲ್ಲಿ ಇಂದು ಸಂಜೆ ಬೃಹತ್ ಸಮಾವೇಶವನ್ನು ಕಮಲ್ ಹಾಸನ್ ಹಮ್ಮಿಕೊಂಡಿದ್ದು ಇಲ್ಲಿ ತಮ್ಮ ಪಕ್ಷದ ಹೆಸರು ಘೋಷಣೆ ಮಾಡಲಿದ್ದಾರೆ.
ಕಮಲ್ ಹಾಸನ್ ರಾಮನಾಥಪುರಂನಲ್ಲಿರುವ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ನಿವಾಸಕ್ಕೆ ಭೇಟಿ ನೀಡಿದರು. ಕಲಾಂ ನಿವಾಸಕ್ಕೆ ಭೇಟಿ ನೀಡಿ ಅವರ ಸಹೋದರರನ್ನು ಭೇಟಿಯಾದ ನಂತರ ಪ್ರತಿಕ್ರಿಯೆ ನೀಡಿದ ಕಮಲ್, 'ಮನೆಗಳ ಸರಳತೆಯಿಂದ ಮಹತ್ವ ಬರುತ್ತದೆ; ಈ ಮನೆ ಅಂಥಹ ಮನೆಗಳಲ್ಲಿ ಒಂದು. ಇದು ನನ್ನ ಮನಸ್ಸಿಗೆ ನಾಟಿತು,' ಎಂದು ಹೇಳಿದ್ದಾರೆ. ಅಬ್ದುಲ್ ಕಲಾಂ ವಿದ್ಯಾಭ್ಯಾಸ ನಡೆಸಿದ ಶಾಲೆಗೂ ಕಮಲ್ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಶಾಲೆಯನ್ನು ರಾಜಕಾರಣದಿಂದ ಹೊರಗಿಡಬೇಕು ಎಂದು ಹೇಳಿ ಕಮಲ್ ಭೇಟಿಯನ್ನು ಎಐಎಡಿಎಂಕೆ ವಿರೋಧಿಸಿದ್ದರಿಂದ ತಮಿಳು ನಟ ಶಾಲೆಗೆ ಭೇಟಿ ನೀಡಿಲ್ಲ.ಪಕ್ಷದ ಧ್ವಜವನ್ನೂ ಅವರು ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಭಾಗವಹಿಸಲಿದ್ದಾರೆ ಎಂದು ಕಮಲ್ ಆಪ್ತ ಮೂಲಗಳು ಹೇಳಿವೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಹಾಗೂ ಜನರ ಪರವಾಗಿ ಕೆಲಸ ಮಾಡಲು ತಾವು ರಾಜಕೀಯಕ್ಕೆ ಬರುತ್ತಿರುವುದಾಗಿ ಈಗಾಗಲೇ ಕಮಲ್ ಹಾಸನ್ ಘೋಷಿಸಿದ್ದಾರೆ.
Comments