ಕಾವೇರಿ ವಿಚಾರಕ್ಕೆ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡ ದೇವೇಗೌಡ್ರು
ಇತ್ತೀಚೆಗಷ್ಟೇ ಕಾವೇರಿ ನೀರು ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕದ ಪರ ತೀರ್ಪು ಕೊಟ್ಟಿದೆ. ಈ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕಿಡಿ ಕಾರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸಿಹಿ ಹಂಚಿರು ವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ವಾಸ್ತವ ನೆಲೆಯಲ್ಲಿ ಚಿಂತನೆ ಮಾಡಿದಾಗ ನಮಗೆ ಈ ತೀರ್ಪಿನಿಂದಲೂ ತೃಪ್ತಿ ಆಗಿಲ್ಲ. ಹೀಗಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು. ನ್ಯಾಯಯುತವಾಗಿ ನಮಗೆ ವಾರ್ಷಿಕ 14.75 ಟಿಎಂಸಿಯಲ್ಲ. 40 ಟಿಎಂಸಿಗೂ ಅಧಿಕ ನೀರು ಉಳಿಯಬೇಕಿತ್ತು. ಸಿಗಬೇಕಿತ್ತು. ಬೆಂಗಳೂರಿಗೆ 10 ಟಿಎಂಸಿಗೂ ಹೆಚ್ಚು ನೀರು ಬಳಸಿಕೊಳ್ಳಲು ಅವಕಾಶ ನೀಡಬೇಕಿತ್ತು. ನಾವು ಯಾವುದೇ ರೀತಿಯಲ್ಲೂ ತಮಿಳುನಾಡಿಗೆ ಮೋಸ, ಅನ್ಯಾಯ ಕಿಂಚಿತ್ತೂ ಮಾಡಿಲ್ಲ. ಆದರೂ ತಮಿಳುನಾಡು ಸುಪ್ರಿಂ ನೀಡಿರುವ ತೀರ್ಪಿನ ವಿರುದ್ಧ ತಕರಾರು ತೆಗೆದರೆ ನಮ್ಮಲ್ಲೂ ಬೇಕಾದಷ್ಟು ಅಸ್ತ್ರಗಳಿವೆ ಎಂಬ ಎಚ್ಚರಿಕೆ ಸಂದೇಶವನ್ನು ಇದೇ ವೇಳೆ ರವಾನಿಸಿದರು. ಸುಪ್ರಿಂ ತೀರ್ಪಿನಿಂದ ನಿರೀಕ್ಷಿತ ನ್ಯಾಯ ಸಿಗದಿದ್ದರೂ ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರು ಸಿಹಿ ಹಂಚಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಹಂಚಿದ್ದಾರೆ? ಇವರಿಗೇನಾದರೂ ಸೂಕ್ಷ್ಮ ವಿವೇಚನೆ ಇದೆಯೇ? ಎಂದಿದ್ದಾರೆ.
Comments