‘ಕಮಲ’ ಬಿಟ್ಟು ‘ಕೈ’ ಹಿಡಿಯಲು ಮುಂದಾದ ರೆಡ್ಡಿ ಗ್ಯಾಂಗ್..!!

ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿಯ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಮತ್ತಿತರರು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಳ್ಳಾರಿ ರಾಜಕಾರಣದಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ತಲೆ ಎತ್ತಬಹುದು ಎಂದು ಲೆಕ್ಕಾಚಾರ ಹಾಕಿದ್ದರು.
ಇದಕ್ಕೆ ಪೂರಕವಾಗಿ ಗಾಲಿ ಜನಾರ್ಧನ ರೆಡ್ಡಿ ಅವರಿಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು ಎಂದು ರೆಡ್ಡಿಗಳ ಪಡೆ ರಾಜ್ಯ ನಾಯಕರ ಮೂಲಕ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿತ್ತು. ಆದರೆ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಯ ಯಾವುದೇ ಕ್ಷೇತ್ರದಿಂದ ಮಾತ್ರವಲ್ಲ, ರಾಜ್ಯದ ಯಾವುದೇ ಭಾಗದಿಂದಲೂ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ ಎಂದು ಹೈಕಮಾಂಡ್ ತಿಳಿಸಿದೆ ಎನ್ನಲಾಗುತ್ತಿದೆ. ಇದಾದ ನಂತರ ಇದ್ದಕ್ಕಿದ್ದಂತೆ ಗಣಿ ರೆಡ್ಡಿಗಳ ಪಾಳೆಯದ ಹಲ ಶಾಸಕರು ಇದ್ದಕ್ಕಿದ್ದಂತೆ ಕೈ ಪಾಳೆಯಕ್ಕೆ ಧುಮುಕುತ್ತಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಕಮಲ ಪಾಳೆಯ ತಲೆ ಎತ್ತದಂತೆ ನೋಡಿಕೊಳ್ಳಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ವರಿಷ್ಠರಿಗೆ ಮೂಲಗಳು ವಿವರ ನೀಡಿವೆ ಎಂಬ ಮಾತುಗಳು ಕೇಳಿಬರುತ್ತಿವೆ.ಕಂಪ್ಲಿ ಶಾಸಕ ಸುರೇಶ್ ಬಾಬು ಅವರು ಸಂಸದ ಬಿ.ಶ್ರೀರಾಮುಲು ಅವರ ಸ್ವಂತ ಬಾಮೈದ, ಇವರು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ವದಂತಿ ಹಬ್ಬಿದೆ. ಅದೇ ರೀತಿ ಆನಂದ್‍ಸಿಂಗ್ ಹಾಗೂ ನಾಗೇಂದ್ರ ಅವರು ಹೇಳಿ ಕೇಳಿ ರೆಡ್ಡಿಗಳ ಗುಂಪಿನ ಪ್ರಮುಖರು. ಅಸಮಾಧಾನಗೊಂಡಿರು ರೆಡ್ಡಿ ಗ್ಯಾಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಸಜ್ಜಾಗಿದಾರೆ ಎಂದು ಮೂಲಗಳು ತಿಳಿಸಿವೆ.
Comments