'ಕೈ-ಕಮಲ'ಕ್ಕೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಜೆಡಿಎಸ್




ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ತೀವ್ರ ಪೈಪೋಟಿ ನೀಡಲು ಮಿತ್ರಪಕ್ಷಗಳ ಜೊತೆ ಜೆಡಿಎಸ್ ಕೈ ಜೋಡಿಸಿದೆ. ಮುಂದಿನ ಚುನಾವಣೆಯಲ್ಲಿ ಬಹುಮತ ಗಳಿಸಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಮಹದಾಸೆ ಈಡೇರಿಸಿಕೊಳ್ಳಲು ಈ ಸಮಾನ ಮನಸ್ಕರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಷ್ಟ್ರೀಯ ಪಕ್ಷಗಳನ್ನು ಮಣಿಸಲು ಜೆಡಿಎಸ್ ಸಿದ್ಧತೆ ನಡೆಸಿದೆ.
ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಜತೆ ಚುನಾವಣಾ ಪೂರ್ವ ಮೈತ್ರಿ ಸಾಧಿಸಿರುವ ಜಾತ್ಯಾತೀಯ ಜೆಡಿಎಸ್ ಇಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಜತೆ ಮೈತ್ರಿ ಸಾಧಿಸಿದೆ.ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ ಕುಮಾರಸ್ವಾಮಿ ಅವರು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಮನೆಗೆ ಗುರುವಾರ ಬೆಳಗ್ಗೆ ತೆರಳಿ, ಒಪ್ಪಂದ ಮಾಡಿಕೊಂಡಿದ್ದಾರೆ.ಉಪಹಾರ ಕೂಟದ ನಂತರ ಟಿಕೆಟ್ ಹಂಚಿಕೆಯ ಬಗ್ಗೆ ಕೂಡಾ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ರಾಜಕಾರಣಿ, ಇತ್ತೀಚೆಗೆ ಜೆಡಿಎಸ್ ಗೆ ಮರಳಿರುವ ಪಿ.ಜಿ.ಆರ್ ಸಿಂಧ್ಯಾ ಅವರಿದ್ದರು. ಈ ಸೀಟು ಹಂಚಿಕೆ ಮತ್ತು ಚುನಾವಣಾ ಪೂರ್ವ ಮೈತ್ರಿಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಸಮ್ಮತಿಸಿದ ನಂತರ ಈ ಬೆಳವಣಿಗೆ ನಡೆದಿದೆ.ಎನ್ ಸಿಪಿ ಹಾಗೂ ಜೆಡಿಎಸ್ ಜತೆ ಜತೆಯಾಗಿ ವಿಧಾನಸಭಾ ಚುನಾವಣೆ ಎದುರಿಸಲಿವೆ. ಎನ್ ಸಿಪಿ ಸುಮಾರು 5 ರಿಂದ 7 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮಾಹಿತಿ ಸಿಕ್ಕಿದೆ.ಬಹುಜನ ಸಮಾಜವಾದಿ ಪಕ್ಷವು 14 ಜಿಲ್ಲೆಗಳಲ್ಲಿ 20 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಮುಂದಾಗಿದೆ. ಕರ್ನಾಟಕದ ಚುನಾವಣೆ ಮಟ್ಟಿಗೆ ಬಿಎಸ್ಪಿ ಜತೆಗಿನ ಮೈತ್ರಿ ನಂತರ ಎನ್ ಸಿಪಿ ಜತೆಗಿನ ಜೆಡಿಎಸ್ ಮೈತ್ರಿ ಪ್ರಮುಖ ಬದಲಾವಣೆ ತರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Comments