ಬಿಎಸ್ಪಿ ನಂತರ ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಬಗ್ಗೆ ದೇವೇಗೌಡ್ರು ಬಿಚ್ಚಿಟ್ಟ ಅಂಶಗಳು...!!
ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ಪಿ ನಂತರ ಕಮ್ಯುನಿಷ್ಟರೊಂದಿಗೆ ಮೈತ್ರಿ ಮಾಡಿಕೊಳ್ಳುವ ಚಿಂತನೆ ಇದ್ದು, ಈ ಕುರಿತು ಶೀಘ್ರವೇ ಮಾತುಕತೆ ನಡೆಸಲಾಗುವುದು. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ, ರೈತರ ಸಾಲ ಮನ್ನಾ ನಿರ್ಧಾರಕ್ಕೆ ಬದ್ಧವಾಗಿದ್ದು, ಇದಕ್ಕೆ ಜನರು ಆಶೀರ್ವಾದ ಮಾಡಬೇಕು. ಯಡಿಯೂರಪ್ಪ, ಸಿದ್ದರಾಮಯ್ಯರಿಗಿಂತ ಕುಮಾರಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಹೊರತುಪಡಿಸಿ ಜೆಡಿಎಸ್ ಅಧಿಕಾರಕ್ಕೆ ಬರಬೇಕೆಂಬ ಗುರಿಯಿಂದ ಮಾಯಾವತಿ ಜೊತೆ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪರವರ ಸರ್ಕಾರವನ್ನು ಜನ ನೋಡಿದ್ದಾರೆ. ಒಂದು ಬಾರಿ ಕುಮಾರಸ್ವಾಮಿಗೆ ಅಧಿಕಾರ ಕೊಡಿ, ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ. ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಭರವಸೆ ನುಡಿದರು. ಸಿಎಂ ಬಗ್ಗೆ ಲಘುವಾಗಿ ಮಾತನಾಡಿದ್ದು ನಿಜ. ಆದರೆ ಅದು ಈಗ ಮುಗಿದ ಅಧ್ಯಾಯ ಎಂದು ಇದೇ ವೇಳೆ ತಿಳಿಸಿದರು.ಮುಖ್ಯಮಂತ್ರಿಗಳು ನಾನೇ ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಜೆಡಿಎಸ್‍ನಲ್ಲಿಯೂ ಕೂಡಾ ಅಹಿಂದ ನಾಯಕರು ಇಲ್ಲವೇ ಎಂದು ಪ್ರಶ್ನಿಸಿದ ಅವರು, ಮುಸ್ಲಿಂ ಮತ್ತು ದಲಿತರು ಕಾಂಗ್ರೆಸ್‍ನಿಂದ ದೂರ ಸರಿಯುವ ಸಂದರ್ಭ ಬರಲಿದೆ ಎಂದರು.ದೇವೇಗೌಡರು ಯಾರನ್ನೂ ಬೆಳೆಸಿಲ್ಲ, ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದ ಸಚಿವ ಎ ಮಂಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮಂಜು ಸತ್ಯ ಹೇಳಲಿ. ಅದನ್ನು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಸ್ವತಃ ಮುಖ್ಯಮಂತ್ರಿಗಳು ಎಲ್ಲಿಂದ ಬೆಳೆದು ಬಂದವರು ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಪ್ರತಿಕ್ರಿಯಿಸಿದರು.
ಜೆಡಿಎಸ್ ನಿಂದ ಫೆ.17 ರಂದು ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ನಡೆಸಲಿದ್ದು, ಮಾಯಾವತಿ ಸೇರಿದಂತೆ ಹಲವು ನಾಯಕರು ಭಾಗಿಯಾಗುವುದಾಗಿ ಹೇಳಿದರು. ಬಹುಮನಿ ಸುಲ್ತಾನರ ಜಯಂತಿ ಆಚರಣೆಗೆ ರಾಜ್ಯ ಸರಕಾರ 30 ಕೋಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಯಾವುದೇ ಜಯಂತಿಗೆ ನಮ್ಮ ವಿರೋಧ ಇಲ್ಲ. ಇಂತಹ ಕಾರ್ಯಕ್ರಮ ಮಾಡಿ ಅವರು ಅಧಿಕಾರಕ್ಕೆ ಬಂದರೆ ಸಂತೋಷ ಎಂದು ವ್ಯಂಗ್ಯವಾಡಿದರು.12 ವರ್ಷಕ್ಕೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರಧಾನಿ ಸೇರಿದಂತೆ ಇತರೆ ಗಣ್ಯರು ಆಗಮಿಸುತ್ತಿರುವುದು ಸಂತಸದ ವಿಚಾರ. ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ನನಗೆ ಮಾತನಾಡಲು ಅವಕಾಶ ಸಿಗದಿರುವುದಕ್ಕೆ ಬೇಸರವಿಲ್ಲ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಹೆಚ್.ಎಸ್. ಪ್ರಕಾಶ್, ಕೆ.ಎಂ. ಶಿವಲಿಂಗೇಗೌಡ, ಹೆಚ್.ಕೆ. ಕುಮಾರಸ್ವಾಮಿ, ಸಿಎನ್ ಬಾಲಕೃಷ್ಣ, ಹಾಗೂ ಮುಖಂಡ ಲಿಂಗೇಶ್, ಪಟೇಲ್ ಶಿವರಾಂ, ಚನ್ನವೀರಪ್ಪ, ತೋ.ಚ. ಅನಂತಸುಬ್ಬರಾವ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Comments