ಶಿಡ್ಲಘಟ್ಟದಲ್ಲಿ ಜೆಡಿಎಸ್ ರಾಜ್ಯಭಾರ ನಡೆಸಲು ಸಿದ್ದ..!!

14 Feb 2018 6:00 PM | Politics
419 Report

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತು ಬೃಹತ್ ಸಮಾವೇಶವನ್ನು ಫೆಬ್ರುವರಿ 17 ರ ಶನಿವಾರ ಬೆಂಗಳೂರಿನ ಹೊರವಲಯದಲ್ಲಿ ಹಮ್ಮಿಕೊಂಡಿದ್ದು ಅದಕ್ಕಾಗಿ ತಾಲ್ಲೂಕಿನಿಂದ 120 ಬಸ್ಸುಗಳಲ್ಲಿ ಸುಮಾರು 7000 ಮಂದಿ ಕಾರ್ಯಕರ್ತರು ತೆರಳುವುದಾಗಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತಾಲ್ಲೂಕಿನಲ್ಲಿ ಜಾತ್ಯಾತೀತ ಜನತಾದಳದ ಪರ ಜನಬೆಂಬಲವಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದ ಬಗ್ಗೆ ಅಚಲವಾದ ನಂಬಿಕೆಯಿದೆ. ರೈತರ ಉಳಿವಿಗಾಗಿ ಸಾಲ ಮನ್ನಾ ಮತ್ತು ಶಾಶ್ವತ ನೀರು ಯೋಜನೆ ಮಾಡುವ ಇಚ್ಛಾಶಕ್ತಿಯನ್ನು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರ ಇರುವುದರಿಂದ ಅವರು ರಾಜ್ಯದ ಜನರಿಗೆ ಆಶಾಜ್ಯೋತಿಯಾಗಿದ್ದಾರೆ. ನಮ್ಮ ಗುರಿ ಏನಿದ್ದರೂ ‘ಕ್ಷೇತ್ರದಲ್ಲಿ ಶಾಸಕರಾಗಿ ಎಂ.ರಾಜಣ್ಣ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಕುಮಾರಣ್ಣ’ ಎಂದು ಹೇಳಿದರು.ಶಾಸಕ ಎಂ.ರಾಜಣ್ಣ ಮಾತನಾಡಿ, ಹಾಲಿ ಶಾಸಕರಿಗೆ ಟಿಕೇಟ್ ನೀಡುವುದಾಗಿ ಪಕ್ಷದ ಮುಖಂಡರು ಭರವಸೆ ನೀಡಿದ್ದಾರೆ. ಹೀಗಾಗಿ ಪಕ್ಷದ ಗೊಂದಲಗಳಿಗೆ ತೆರೆಬಿದ್ದಿದೆ. ಫೆಬ್ರುವರಿ 17 ರ ಶನಿವಾರ ಕ್ಷೇತ್ರದಿಂದ ಹೆಚ್ಚು ಮಂದಿ ಕಾರ್ಯಕರ್ತರು ತೆರಳುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಿದೆ. ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ನಿಷ್ಠಾವಂತ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಎಲ್ಲರನ್ನೂ ಒಗ್ಗೂಡಿಸುತ್ತೇವೆ. ಕುಮಾರಣ್ಣನವರನ್ನು ಮುಂದಿನ ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.

ಕೊತ್ತನೂರು ಪಂಚಾಕ್ಷರಿರೆಡ್ಡಿ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿ, ಹಲವು ವೈಯಕ್ತಿಕ ಕಾರಣಗಳಿಂದ ಪಕ್ಷದಿಂದ ದೂರವುಳಿದಿದ್ದೆ. ಕುಮಾರಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿ ಹಿಂದೆ ಪಕ್ಷಕ್ಕೆ ದುಡಿದಿದ್ದೇನೆ. ಈಗ ಸಾಂಕೇತಿಕವಾಗಿ ಸೇರ್ಪಡೆಯಾಗಿದ್ದು, ಮುಂದಿನ ದಿನಗಳಲ್ಲಿ ನಡೆಯುವ ‘ಕುಮಾರ ಪರ್ವ’ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಅಪಾರ ಬೆಂಬಲಿಗರೊಂದಿಗೆ ಸೇರ್ಪಡೆಗೆ ಅಧಿಕೃತತೆ ದೊರಕಿಸಲಾಗುತ್ತದೆ. ‘ಶಿಡ್ಲಘಟ್ಟಕ್ಕೆ ರಾಜಣ್ಣ, ಮುಖ್ಯಮಂತ್ರಿಯಾಗಿ ಕುಮಾರಣ್ಣ’ ನಮ್ಮ ಸಂಕಲ್ಪವಾಗಿದೆ ಎಂದರು.ಜೆಡಿಎಸ್ ಮುಖಂಡರಾದ ಅಫ್ಸರ್ಪಾಷ, ಮೇಲೂರು ಕೆ.ಮಂಜುನಾಥ್, ಕನಕಪ್ರಸಾದ್, ರಹಮತ್ತುಲ್ಲ, ಸುರೇಂದ್ರ, ಮುರಳಿ, ಆಂಜಿನಪ್ಪ ಹಾಜರಿದ್ದರು.

Edited By

Shruthi G

Reported By

Shruthi G

Comments