ಲೋಕಸಭಾ ಚುನಾವಣೆಯ ಬಗ್ಗೆ ಭವಿಷ್ಯ ನುಡಿದ ದೇವೇಗೌಡ್ರು..!!

ಲೋಕಸಭೆ ಚುನಾವಣೆ ಯಾವಾಗಲೋ ಗೊತ್ತಿಲ್ಲ. ಮೊನ್ನೆ ಪ್ರಧಾನಿ ಕೊಟ್ಟ ಹೇಳಿಕೆ ನೋಡಿದರೆ ಇಂದೇ ಚುನಾವಣೆ ನಡೆಯಬಹುದು ಎನ್ನುವ ವಾತಾವರಣ ಉಂಟಾಗಿದೆ. ಬಹುಶಃ ಇದೇ ವರ್ಷ ಲೋಕಸಭೆಗೆ ಚುನಾವಣೆ ನಡೆದರೂ ಅಚ್ಚರಿ ಪಡಬೇಕಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಸಮಸ್ಯೆ ಬಗೆಹರಿಸಲು 3 ಬಾರಿ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಏನು ಮಾಡಬಹುದು ಅನ್ನೋ ಸಲಹೆ ನೀಡಿದ್ದೇನೆ, ಪತ್ರ ಬರೆದಿದ್ದೇನೆ. ಒಂದು ಬಾರಿ ಭೇಟಿಯಾಗಿದ್ದೇನೆ. ಆದರೆ, ನನ್ನ ಸಲಹೆಗೆ ಅವರು ಮಾನ್ಯತೆ ಕೊಟ್ಟಿಲ್ಲ. ನೀರಾವರಿ ವಿಷಯದಲ್ಲಿ ನಾನು ಪ್ರಧಾನಿ ಆಗಿದ್ದಾಗ ಸಾಕಷ್ಟು ಜನಪರ ತೀರ್ಮಾನ ಕೈಕೊಂಡಿದ್ದೆ. ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆದವರಿಗೆ ಮಾನವೀಯತೆ ಇರಬೇಕು ಎಂದರು.ಬಿಎಸ್ಪಿ ಜೊತೆ 20 ಸೀಟು ಹೊಂದಾಣಿಕೆ ಅಂತಿಮಗೊಂಡಿವೆ. ಉಳಿದ 204 ಸೀಟುಗಳಲ್ಲಿ ಕೆಲವನ್ನು ಎಡಪಂಥೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ಬಿಎಸ್ಪಿ ಕೇವಲ ದಲಿತರ ಪಕ್ಷ ಅನ್ನುವ ತಪ್ಪು ಕಲ್ಪನೆ ಸರಿ ಅಲ್ಲ. ಬಿಎಸ್ಪಿಯಲ್ಲಿ ಬ್ರಾಹ್ಮಣರು, ಇತರೆ ಜಾತಿಯವರು ಇದ್ದಾರೆ. ಬಡತನ, ಶೋಷಣೆಗೊಳಗಾದ ಸಣ್ಣ ಸಮಾಜದವನ್ನು ಸೇರಿಸಿ ಬಿಎಸ್ಪಿ ಕಟ್ಟಲಾಗಿದೆ. ಕಾನ್ಶಿರಾಮ್, ಮಾಯಾವತಿ ಸಾಕಷ್ಟು ಶ್ರಮಿಸಿದ್ದಾರೆ. ಪ್ರಾದೇಶಿಕ ಪಕ್ಷವನ್ನೇ ಅಧಿಕಾರಕ್ಕೆ ತರಬೇಕು ಎಂದು ಉದ್ದೇಶಿಸಿ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಪಕ್ಷಗಳನ್ನು ಹೊರಹಾಕುವ ಸಂಕಲ್ಪ ಮಾಡಿಕೊಂಡು ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದರು.ಸಿಎಂ ಸಿದ್ದರಾಮಯ್ಯ ಮಠಗಳು ಸೇರಿದಂತೆ ತುಂಬಾ ವಿಷಯಗಳ ಮೇಲೆ ಕಣ್ಣು ಹಾಕಿದ್ದಾರೆ. ಚುನಾವಣೆಗೀಗ 3 ತಿಂಗಳಿದೆ. ಕಾಂಗ್ರೆಸ್, ಬಿಜೆಪಿ ತಲಾ 5 ವರ್ಷ ರಾಜ್ಯ ಆಳಿದ್ದಾರೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ಗೂ 5 ವರ್ಷ ಅಧಿಕಾರ ಕೊಡಿ ಎಂದು ಜನರನ್ನು ಬೇಡುತ್ತಿದ್ದೇವೆ ಎಂದರು.ರಾಜ್ಯದ ನೀರಾವರಿ ಮಂತ್ರಿ ಎಂ.ಬಿ.ಪಾಟೀಲರ ಕಾರ್ಯವೈಖರಿಗೆ ಮುಂಬರುವ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ. ಅವರ ಕೆಲಸದ ಬಗ್ಗೆ ನಾನು ಸರ್ಟಿಫಿಕೇಟ್ ಕೊಡಲ್ಲ. ಈ ಸರ್ಕಾರ ಏನು ಮಾಡಿದೆ ಅನ್ನೋ ಚರ್ಚೆ ಮಾಡೋ ಶಕ್ತಿಯನ್ನು ಜನತೆ ಹೊಂದಿದ್ದಾರೆ. ಅವರೇ ತೀರ್ಪು ಕೊಡ್ತಾರೆ ಎಂದರು.
Comments