ಇಂದು ಮಾಜಿ ಪ್ರಧಾನಿ ದೇವೇಗೌಡರ ಸಾಧನೆ ಕುರಿತ ಪುಸ್ತಕ ಬಿಡುಗಡೆ

ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಿನ 10 ತಿಂಗಳ ಸಾಧನೆ ಕುರಿತಾದ ಕೃತಿ 'ಸಾಧನೆಯ ಶಿಖರಾರೋಹಣ' ಇದೇ ಫೆಬ್ರವರಿ 10 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಡಾ. ಪ್ರಧಾನ್ ಗುರುದತ್ತ ಹಾಗೂ ಡಾ ಸಿ.ನಾಗಣ್ಣ ಈ ಪುಸ್ತಕವನ್ನು ಬರೆದಿದ್ದಾರೆ.ಇಂದು ಸಂಜೆ 4:30ಕ್ಕೆ ಮೈಸೂರು ವಿವಿಯ ಸೆನೆಟ್ ಭವನದಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಾನಂದ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ," ಎಂದು ಅವರು ಮಾಹಿತಿ ನೀಡಿದರು."ಪ್ರಧಾನ ಮಂತ್ರಿಯಾಗಿ ಎಚ್.ಡಿ. ದೇವೇಗೌಡರು ಮಾಡಿದ ಸಾಧನೆ ಹಾಗೂ ರಾಜತಾಂತ್ರಿಕ ನೀತಿ ಕುರಿತ ಪುಸ್ತಕ ಇದಾಗಿದೆ," ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.
"ಮುಂದಿನ ತಿಂಗಳಲ್ಲಿ ಈ ಕೃತಿಯು ಹಿಂದಿ ಹಾಗೂ ಇಂಗ್ಲಿಷ್ ನಲ್ಲಿಯೂ ಹೊರಬರಲಿದೆ. ದೆಹಲಿಯಲ್ಲಿ ಈ ಕೃತಿಗಳ ಲೋಕಾರ್ಪಣೆಗೆ ಚಿಂತನೆ ನಡೆಸಲಾಗುತ್ತಿದೆ," ಎಂದ ಅವರು, "ದೇವೇಗೌಡರ ಪುಸ್ತಕದ ಜತೆಗೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯ ಸಾಧನೆ ಕುರಿತು ಪುಸ್ತಕ ಶೀಘ್ರವೇ ಬಿಡುಗಡೆಯಾಗಲಿದೆ," ಎಂದು ಅವರು ಹೇಳಿದರು.ಬಳಿಕ ಲೇಖಕ ಡಾ. ಪ್ರಧಾನ ಗುರುದತ್ತ ಅವರು ಮಾತನಾಡಿ, "ದೂರದೃಷ್ಟಿ ಇದ್ದ ಒಬ್ಬ ಅಪರೂಪದ ಆಡಳಿತಗಾರ ಎಚ್. ಡಿ. ದೇವೇಗೌಡರು. ಹೀಗಾಗಿ ಈ ಪುಸ್ತಕ ರಚಿಸಲು 40 ರಿಂದ 50 ಭಾರೀ ಸಂದರ್ಶನ ಮಾಡಿದ್ದೇವೆ. ಅವರಿಗೆ ನೆನಪಿನ ಶಕ್ತಿ ಆಗಾಧವಾಗಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Comments