ನರಸಿಂಹ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಜೆಡಿಎಸ್ ನಿಂದ ಪ್ರಭಾವಿ ಮುಖಂಡ ಕಣಕ್ಕೆ..!




ಮೈಸೂರಿನ ನರಸಿಂಹರಾಜ ಕ್ಷೇತ್ರ ಅಂದ್ರೆ ಅಲ್ಪಸಂಖ್ಯಾತ ಸಮುದಾಯದ ಪ್ರಭಾವವಿರುವ ಕ್ಷೇತ್ರ. ರಾಜಕೀಯ ಮುತ್ಸದ್ಧಿಯಾಗಿದ್ದ ದಿವಂಗತ ಅಜೀಜ್ ಸೇಠ್ರವರನ್ನು ನೀಡಿದ್ದ ಕ್ಷೇತ್ರವಿದು, ನಾಲ್ಕು ಬಾರಿ ತನ್ವೀರ್ ಸೇಠ್ರವರಿಗೆ ಆಶಿರ್ವಾದ ಮಾಡಿ, ಇದೀಗ ಸಚಿವರಾಗುವಂತೆ ಮಾಡಿದ ನರಸಿಂಹರಾಜ ಕ್ಷೇತ್ರ ಬದಲಾವಣೆಯತ್ತ ಮುಖ ಮಾಡಿರುವಂತೆ ಇದೆ. ಈ ಬಾರಿ ಪರಿಸ್ಥಿತಿ ಅಕ್ಷರ ಸಹ ಬದಲಾವಣೆಯತ್ತ ಜನ ಮುಖ ಮಾಡಿದ್ದಾರೆ ಎನ್ನುತ್ತಿದ್ದಾರೆ ಇತರ ಪಕ್ಷಗಳ ಮುಖಂಡರು. ಇದರ ಜೊತೆಗೆ ನರಸಿಂಹರಾಜ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ರಣಕಹಳೆಯನ್ನು ಈ ಬಾರಿ ತುಸು ಜೋರಾಗಿಯೇ ಊದಿದಂತಿದೆ.
ಹೌದು, ಜೆಡಿಎಸ್ ಈ ಬಾರಿ ನರಸಿಂಹರಾಜ ಕ್ಷೇತ್ರಕ್ಕೆ ತನ್ವೀರ್ ಸೇಠ್ ವಿರುದ್ಧ ಗೆಲ್ಲುವ ಕುದುರೆಯೊಂದನ್ನು ಗುರುತಿಸಿ ಕೊಂಡಂತಿದೆ. ಹೌದು, ಮೂಲಗಳ ಪ್ರಕಾರ ಅಬ್ದುಲ್ ಅಜೀಜ್ರವರು ಇದೇ ತಿಂಗಳ 17ರಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಮ್ಮುಖದಲ್ಲಿ ಪಕ್ಷ ಸೇರಲಿದ್ದಾರೆ. ಆ ಮೂಲಕ ನರಸಿಂಹರಾಜ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿ ಮತ್ತು ಬಹುತೇಕ ಅಬ್ದುಲ್ ಅಜೀಜ್ರವರೇ ಅಭ್ಯರ್ಥಿ ಎಂಬ ಮಾತುಕತೆಯ ಮೇರೆಯೇ ಪಕ್ಷ ಸೇರುತ್ತಿದ್ದಾರೆ ಎನ್ನಲಾಗಿದೆ. 2008ರ ಚುನಾವಣೆಯಲ್ಲಿ ಎಸ್. ನಾಗರಾಜು ( ಸಂದೇಶ್ ) ಜೆಡಿಎಸ್ ಕಣಕ್ಕಿಳಿದು 31104 ಮತ ಪಡೆದು ಗೆಲುವು ಸಾಧಿಸಲಾಗದಿದ್ದರು, ಜೆಡಿಎಸ್ ಪ್ರಭಾವ ಈ ಕ್ಷೇತ್ರದಲ್ಲಿ ಇದೆ ಎಂಬುದನ್ನು ಸಾಭೀತು ಪಡಿಸುವಲ್ಲಿ ಯಶಸ್ವಿಯಾಗಿದ್ದರು.ಇದನ್ನು ಗಮನಿಸಿಯೇ ಕುಮಾರಸ್ವಾಮಿಯವರು ಈ ಬಾರಿ ನರಸಿಂಹರಾಜ ಕ್ಷೇತ್ರಕ್ಕೆ ಅಬ್ದುಲ್ ಅಜೀಜ್ ಎಂಬ ಪ್ರಭಾವಿ ವ್ಯಕ್ತಿಯನ್ನು ಕಣಕ್ಕಿಳಿಸುವ ಮೂಲಕ, ಪಕ್ಷದ ಸಾಂಪ್ರದಾಯಿಕ ಮತ ಮತ್ತು ವೈಯಕ್ತಿಯ ಮತಗಳು ಎರಡನ್ನೂ ಲೆಕ್ಕ ಹಾಕಿ ಇದೇ ತಿಂಗಳ 17ರಂದು ಪಕ್ಷಕ್ಕೆ ಅಬ್ದುಲ್ ಅಜೀಜ್ವರನ್ನು ಬರಮಾಡಿಕೊಳ್ಳುತ್ತಿದ್ದಾರೆ ಎಂಬುದು ಜೆಡಿಎಸ್ ಪಡಸಾಲೆಯ ಗುಸುಗುಸು.ಒಟ್ಟಾರೆ ಅಬ್ದುಲ್ ಅಜೀಜ್ ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ ಎನ್ನುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದ್ದು, ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದೆ. ಜೊತೆಗೆ ಜೆಡಿಎಸ್ ಪಕ್ಷದಿಂದ ಅಬ್ದುಲ್ ಅಜೀಜ್ ಅಭ್ಯರ್ಥಿ ಎಂಬ ಮಾತು ಕೇಳಿ ಬರುತ್ತಿದ್ದಂತೆ ಜೆಡಿಎಸ್ ಪಾಳಯದಲ್ಲಿಯೂ ಒಂದು ಹೊಸ ಹುಮ್ಮಸ್ಸೊಂದು ಮನೆ ಮಾಡಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
Comments