ಮೇಲ್ಮನೆಗೆ ಅಕ್ಷರದಾಸೋಹ ಪ್ರತಿಭಟನಾ ಬಿಸಿ ತಟ್ಟಿಸಿದ ಜೆಡಿಎಸ್ ಸದಸ್ಯ ಶರವಣ..!

ಅಕ್ಷರದಾಸೋಹ ಯೋಜನೆ ಕಾರ್ಯಕರ್ತೆಯರ ಪ್ರತಿಭಟನೆಯ ಬಿಸಿ ಮೇಲ್ಮನೆ ತಲುಪಿಸಿದ ಜೆಡಿಎಸ್ ಸದಸ್ಯ ಶರವಣ, ಕಾರ್ಯಕರ್ತೆಯರ ಪ್ರತಿಭಟನೆಗೆ ಯಾವುದೇ ಪರಿಹಾರ ದೊರಕಿಸಿ ಕೊಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಕಳೆದ ನಾಲ್ಕು ದಿನಗಳಿಂದ ಸಾವಿರಾರು ಬಿಸಿಯೂಟ ಯೋಜನೆಯ ಕಾರ್ಯಕರ್ತೆಯರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸೌಜನ್ಯಕ್ಕಾದರೂ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿಲ್ಲ . ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಜೆಡಿಎಸ್‍ನ ಶರವಣ ಮುಂತಾದವರು ಶೂನ್ಯ ವೇಳೆಯಲ್ಲಿ ಪಟ್ಟು ಹಿಡಿದರು. ಇದಕ್ಕೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಅವಕಾಶ ನೀಡಲಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಮಾತನಾಡಿ, ಒಂದು ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ. ಮಾನವೀಯತೆಯ ನೆಲೆಗಟ್ಟಿನಲ್ಲಿ ಕಾರ್ಯಸಾಧು ಟೀಕೆಗಳನ್ನು ಈಡೇರಿಸಲು ಸಿದ್ದನಿದ್ದೇನೆ. ಇಂದು ನಮ್ಮ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಸಭೆ ನಡೆಸುತ್ತಿದ್ದಾರೆ. ಸಭೆಯ ನಂತರ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಭಾಪತಿ ಶಂಕರಮೂರ್ತಿ ಅವರು ಸದನವನ್ನು ಫೆ.16ಕ್ಕೆ ಮುಂದೂಡಿದರು.
Comments