ಜನಾರ್ದನ ಪೂಜಾರಿ ವಿರುದ್ಧ ಹರಿಹಾಯ್ದ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ
ಕರಾವಳಿಯಲ್ಲಿ ಗಲಾಟೆಗಳಾಗಲು, ಬಿಲ್ಲವ ಯುವಕರು ದಾರಿ ತಪ್ಪಲು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರೇ ಕಾರಣ. ಕಾರಣಗಳಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಿರುವ ಬಿಲ್ಲವ ಯುವಕರ ಬಗ್ಗೆ ಅವರಿಗೆ ಕಿಂಚಿತ್ತೂ ಕನಿಕರ ಇಲ್ಲ. ನಾನು ತಿಳಿದಮಟ್ಟಿಗೆ ಜನಾರ್ದನ ಪೂಜಾರಿ ಓರ್ವ ನೈಜ ಆರೆಸ್ಸಿಸ್ಸಿಗ ಎಂದು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪೂಜಾರಿ ಆತ್ಮಚರಿತ್ರೆ ಎನ್ನಲಾದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಪಕ್ಕದಲ್ಲಿಟ್ಟುಕೊಂಡೇ ಅದನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದೊಳಗೆ ಇದ್ದು ಅದೇ ಪಕ್ಷವನ್ನು ಸದಾ ಅವರು ಟೀಕಿಸುತ್ತಾರೆ. ಇವೆಲ್ಲ ಅವರ ಬಗ್ಗೆ ಸಂಶಯ ಮೂಡಿಸುತ್ತವೆ ಎಂದರು.ಜನಾರ್ದನ ಪೂಜಾರಿಯ ಪುಸ್ತಕ ಆತ್ಮ ಚರಿತ್ರೆಯಲ್ಲ, ಅದು ಪಾಪದ ಚರಿತ್ರೆ. ಇಂದಿರಾ ಗಾಂಧಿಗೆ ಬಂಗಾರಪ್ಪ ಹೊಡೆಯಲು ಮುಂದಾಗಿದ್ದರೂ, ಬಂಗಾರಪ್ಪ ಭ್ರಷ್ಟಾಚಾರಿ ಎಂದೆಲ್ಲ ಅವರು ಅದರಲ್ಲಿ ಆರೋಪಿಸಿದ್ದಾರೆ. ಅದೆಲ್ಲ ಸುಳ್ಳು.ಬಂಗಾರಪ್ಪ ಅಂಥವರಾಗಿರಲಿಲ್ಲ. ಅವರು ಎಲ್ಲಾ ಆರೋಪಗಳಿಂದ ಖುಲಾಸೆಗೊಂಡಿದ್ದರು.ಆದರೂ ಬಂಗಾಪ್ಪರನ್ನು ಟೀಕಿಸಿ ಪೂಜಾರಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ನುಡಿದರು.ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಹಲವು ಆರೋಪಗಳಿದ್ದರೂ ಅವರ ಕೇಸು ಹಾಕಲು ಕಾಂಗ್ರೆಸ್ ಸರಕಾರ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ ಮಧು ಬಂಗಾರಪ್ಪ, ಕಾನೂನಿಗಿಂತ ಯಾರು ಮೇಲಲ್ಲ. ಆದರೆ ಸರಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಟೀಕಿಸಿದರು.
Comments