ಆರ್.ಆರ್.ನಗರದಲ್ಲಿ ಜೆಡಿಎಸ್ ಈ ಬಾರಿ ಖಾತೆ ತೆರೆಯಲು ಇರುವ ಅಂಶಗಳು!!

ಕ್ಷೇತ್ರ ಪುನರ್‍ವಿಂಗಡಣೆ ನಂತರ ಅಸ್ತಿತ್ವಕ್ಕೆ ಬಂದಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ಸಮಬಲದ ಹೋರಾಟ ನಡೆಯಲಿದೆ.
ಒಕ್ಕಲಿಗರೇ ಹೆಚ್ಚಿರುವ ಆರ್.ಆರ್.ನಗರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಪ್ರಚಾರಕ್ಕೆ ಕರೆತಂದರೆ ಜೆಡಿಎಸ್‍ಗೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವ ವಾದ ಮಂಡಿಸಿರುವ ಬಿಬಿಎಂಪಿ ಮಾಜಿ ಸದಸ್ಯ ಆರ್.ಪ್ರಕಾಶ್ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.ಮುನಿರತ್ನ ಅವರು ಶಾಸಕರಾಗಿ ಆರಿಸಿ ಬಂದ ನಂತರ ಕ್ಷೇತ್ರದ ಎಲ್ಲ ಬಿಬಿಎಂಪಿ ಸದಸ್ಯರುಗಳ ವಿರೋಧ ಕಟ್ಟಿಕೊಂಡಿದ್ದರು. ಅವರ ವಿರುದ್ಧ ಕಾಂಗ್ರೆಸ್ ಪಕ್ಷದವರೇ ಆದ ಬಿಬಿಎಂಪಿ ಸದಸ್ಯೆ ಆಶಾ ಸುರೇಶ್, ಮಾಜಿ ಸದಸ್ಯ ಗೋವಿಂದರಾಜು, ಬಿಜೆಪಿ ಸದಸ್ಯೆ ಮಮತಾ ವಾಸುದೇವ್, ಜೆಡಿಎಸ್‍ನ ಮಂಜುಳಾ ನಾರಾಯಣಸ್ವಾಮಿ, ಸ್ಥಳೀಯ ಕಾಂಗ್ರೆಸ್ ಮುಖಂಡರುಗಳು ಮುನಿಸಿಕೊಂಡಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ ಎಲ್ಲ ಹಾಲಿ ಮತ್ತು ಮಾಜಿ ಬಿಬಿಎಂಪಿ ಸದಸ್ಯರುಗಳು ಒಂದಾಗಿ ಮುನಿರತ್ನ ವಿರುದ್ಧ ಪ್ರಚಾರ ಮಾಡುವ ಸಾಧ್ಯತೆ ಇರುವುದರಿಂದ ಮುನಿರತ್ನ ಅವರ ಗೆಲುವು ಈ ಬಾರಿ ಅಷ್ಟು ಸುಲಭವಾಗಿರುವುದಿಲ್ಲ. ಮುನಿರತ್ನ ಅವರ ವಿರೋಧಿ ಅಲೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ವರದಾನವಾದರೂ ಅಚ್ಚರಿ ಪಡುವಂತಿಲ್ಲ.
Comments