ಹಿಂದಿ ಭಾಷೆಯ ಪ್ರತಿಯನ್ನು ಹಂಚಿದ್ದಕ್ಕೆ ಜೆಡಿಎಸ್ ಸದಸ್ಯ ರಮೇಶ್‌ಬಾಬು ಆಕ್ಷೇಪ

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಹಿಂದಿ ಭಾಷೆಯ ಪ್ರತಿಯನ್ನು ಸದನದಲ್ಲಿ ಹಂಚಿದ್ದಕ್ಕೆ ಜೆಡಿಎಸ್ ಸದಸ್ಯ ರಮೇಶ್‌ಬಾಬು ಆಕ್ಷೇಪ ವ್ಯಕ್ತಪಡಿಸಿದರು.
ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್ತಿನಲ್ಲಿ ರಾಜ್ಯಪಾಲರ ಭಾಷಣ ಮಂಡಿಸಲಾಯಿತು. ಆಗ ಎಲ್ಲ ಸದಸ್ಯರಿಗೂ ಭಾಷಣದ ಪ್ರತಿಗಳನ್ನು ಹಂಚಲಾಯಿತು. ಈ ಸಂದರ್ಭದಲ್ಲಿ ಎದ್ದು ನಿಂತ ರಮೇಶ್‌ಬಾಬು, ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದ್ದೇ ಮೊದಲ ತಪ್ಪು, ಅದಲ್ಲದೇ ಈಗ ಭಾಷಣದ ಹಿಂದಿ ಭಾಷೆಯ ಪ್ರತಿಗಳನ್ನು ಸದಸ್ಯರಿಗೆ ಹಂಚಿದ್ದು ಖಂಡನೀಯ. ರಾಜ್ಯಪಾಲರು ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ್ದರೆ ಅಭ್ಯಂತರವಿಲ್ಲ. ಆದರೆ, ಹಿಂದಿಯಲ್ಲಿ ಭಾಷಣ ಮಾಡಿದ್ದು ತಪ್ಪು, ಕರ್ನಾಟಕದಲ್ಲಿ ಕನ್ನಡಕ್ಕೆ ಮಾತ್ರ ಆದ್ಯತೆ ಸಿಗಬೇಕು ಎಂದರು.ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, "ರಮೇಶ್‌ಬಾಬು ಅವರಿಗೆ ಇಂಗ್ಲಿಷ್ ಬೇಕು. ಆದರೆ, ರಾಷ್ಟ್ರಭಾಷೆ ಹಿಂದಿ ಬೇಡವಂತೆ, ಇದ್ಯಾವ ಧೋರಣೆ ಎಂದು ತರಾಟೆಗೆ ತೆಗೆದುಕೊಂಡರು, ಈ ವೇಳೆ ಜೆಡಿಎಸ್ ಟಿ.ಎ.ಶರವಣ, ಆಗಾ, ರಮೇಶ್‌ಬಾಬು ಬೆಂಬಲಕ್ಕೆ ನಿಂತರು. ಹಿಂದಿ ಭಾಷೆಯ ಪ್ರತಿ ಹಂಚಿಲ್ಲ. ಇಲ್ಲಿರುವುದು ಕನ್ನಡ ಮತ್ತು ಇಂಗ್ಲಿಷ್ ಪ್ರತಿಗಳು ಮಾತ್ರ ಎಂದು ಸಭಾಪತಿ ಸಮಜಾಯಿಷಿ ನೀಡಿದರು. ಆದರೆ, ಸಿಬ್ಬಂದಿಯ ಅಚಾತುರ್ಯದಿಂದಾಗಿ ರಮೇಶ್‌ಬಾಬು ಅವರಿಗೆ ಹಿಂದಿ ಭಾಷಣದ ಪ್ರತಿ ನೀಡಲಾಗಿತ್ತು ಎಂದು ಹೇಳಲಾಗಿದೆ.
Comments