ಬಂಗಾರ ಪೇಟೆಯಲ್ಲಿ ನಡೆದ ‘ಕುಮಾರ ಚೈತನ್ಯ’ ಸಮಾವೇಶದಲ್ಲಿ ಎಚ್ ಡಿಕೆ ಹೇಳಿದ್ದೇನು?



ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಿಂಗ್ ಆಗಲಿದೆ ವಿನಃ ಕಿಂಗ್ ಮೇಕರ್ ಆಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರ ಪೇಟೆಯಲ್ಲಿ ಶನಿವಾರ ಕುಮಾರ ಚೈತನ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಚ ಈ ಬಾರಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯ ನಾಡ ವಿರೋಧಿ ನಿರ್ಧಾರಗಳಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ.
ಒಂದೆಡೆ ಕಾವೇರಿ ನದಿ ನೀರಿನ ಸಮಸ್ಯೆ ಮತ್ತೊಂದೆಡೆ ಮಹಾದಾಯಿ ನದಿ ನೀರಿನ ಸಮಸ್ಯೆಯನ್ನು ಇತ್ಯರ್ಥಪಡಿಸುವಲ್ಲಿ ಎರಡೂ ರಾಜಕೀಯ ಪಕ್ಷಗಳು ವಿಫಲವಾಗಿದ್ದು, ಕೇವಲ ರಾಜಕೀಯ ಕಾರಣಕ್ಕಾಗಿ ನದಿ ವಿವಾದವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ರಾಜ್ಯದ ನೆಲ, ಜಲ, ಭಾಷೆ ರಕ್ಷಣೆಗೆ ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕೆಂಬುವ ಆಸೆಯನ್ನು ರಾಜ್ಯದ ಜನತೆ ಹೊಂದಿರುವುದಾಗಿ ವಿಶ್ಲೇಷಿಸಿದರು.ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ಮೂಲಕ ಕುಡಿಯುವ ನೀರು ಹಾಗೂ ಸಮಗ್ರ ನೀರಾವರಿ ಯೋಜನೆಗೆ ನೀರು ಕೊಡುವುದಾಗಿ ಹೇಳುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಗೆ ಪೂರೈಸುವ ಮೂಲಕ ಜಿಲ್ಲೆಯ ಜನತೆಗೆ ಬಳಕೆ ಗೆ ನೀರನ್ನು ಪೂರೈಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.ಕೇವಲ ಅಧಿಕಾರಕ್ಕಾಗಿ ಜನರ ಕಣ್ಣೊರೆಸುವ ತಂತ್ರದ ಯೋಜನೆಯನ್ನು ರೂಪಿಸುವಲ್ಲಿ ಸಿದ್ದರಾಮಯ್ಯ ನಿಸ್ಸೀಮರು ಸರ್ಕಾರದ ಹಿಂದಿನ ಈ ಕುತಂತ್ರವನ್ನು ಜಿಲ್ಲೆಯ ಜನತೆ ಅರ್ಥಮಾಡಿಕೊಂಡು ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.
Comments