ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡ ಹಾಲಾಡಿ ಶ್ರೀನಿವಾಸ ಶೆಟ್ಟಿ
ಮೂರು ದಿನಗಳ ಹಿಂದಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ ನಡೆಯುವ ನಗರದ ಅರಮನೆ ಮೈದಾನದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಮುಖಂಡರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಶೋಭಾ ಕರಂದ್ಲಾಜೆ ಸೇರಿದಂತೆ ಮತ್ತಿತರರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಹಾಲಾಲಿ ಜೊತೆಗೆ ಅವರ ಬೆಂಬಲಿಗರನ್ನೂ ಕೂಡ ಬಿಎಸ್‍ವೈ ಪಕ್ಷಕ್ಕೆ ಬರಮಾಡಿಕೊಂಡರು. ಮೂರು ದಿನಗಳ ಹಿಂದಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕುಂದಾಪುರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ ಕೊನೆಯ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿದ್ದರಿಂದ ಬೇಸರಗೊಂಡು ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಕುಂದಾಪುರದಿಂದ ಹಾಲಾಡಿ ಬಿಜೆಪಿ ಹುರಿಯಾಳಾಗಿ 5ನೇ ಬಾರಿಗೆ ಅಖಾಡಕ್ಕಿಳಿಯಲಿದ್ದಾರೆ. ಪರಿವರ್ತನೆ ಯಾತ್ರೆ ಸಂದರ್ಭದಲ್ಲಿ ಯಡಿಯೂರಪ್ಪನವರು ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದರು. ಆದರೆ ಇದಕ್ಕೆ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಇದ್ಯಾವುದನ್ನು ಲೆಕ್ಕಿಸದೆ ಬಿಜೆಪಿ ಹಾಲಾಡಿಗೆ ಮಣೆ ಹಾಕಲು ಮುಂದಾಗಿದೆ. ಪುನಃ ಮಾತೃ ಪಕ್ಷಕ್ಕೆ ಅವರು ಆಗಮಿಸಿರುವುದರಿಂದ ಕರಾವಳಿ ಭಾಗದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ಬಂದಂತಾಗಿದೆ.
Comments