ಹತ್ಯೆಗೀಡಾದ ಸಂತೋಷ್ ಬಿಜೆಪಿ ಕಾರ್ಯಕರ್ತರ ನಿವಾಸಕ್ಕೆ ಭೇಟಿ ನೀಡಿದ ಬಿಎಸ್ವೈ
ಬೆಂಗಳೂರು,ಫೆ.2-ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಸಂತೋಷ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಶಿವಾಜಿನಗರದ ಚಿನ್ನಪ್ಪ ಗಾರ್ಡನ್‍ನಲ್ಲಿರುವ ನಿವಾಸಕ್ಕೆ ಯಡಿಯೂರಪ್ಪನವರ ಜೊತೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು , ಜಯನಗರದ ಶಾಸಕ ವಿಜಯಕುಮಾರ್ ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯರು ಮತ್ತಿತರ ಮುಖಂಡರು ಸಾಥ್ ನೀಡಿದರು. ಸಂತೋಷ್ ಅವರ ತಾಯಿ, ಸಹೋದರ, ಸಹೋದರಿ ಹಾಗೂ ಮತ್ತಿತರರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಯಡಿಯೂರಪ್ಪ , ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಆಶ್ವಾಸನೆ ನೀಡಿದರು.
ಈ ವೇಳೆ ಸಂತೋಷ್ ಅವರ ತಾಯಿ, ಸಹೋದರ, ಸಹೋದರಿಯರು ಹಾಗೂ ಕುಟುಂಬದವರು ತಮಗೆ ಕೆಲ ದುಷ್ಕರ್ಮಿಗಳಿಂದ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ಕೊಡಲು ಸರ್ಕಾರಕ್ಕೆ ಒತ್ತಡ ಹಾಕಬೇಕೆಂದು ಮನವಿ ಮಾಡಿದರು. ಕೆಲ ಗಾಂಜಾ ಮಾರುವವರು ನಮ್ಮನ್ನು ಗುರಿಯಾಗಿಟ್ಟುಕೊಂಡು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಕುಟುಂಬದ ಸದಸ್ಯರೆಲ್ಲರಿಗೂ ಪ್ರಾಣ ಬೆದರಿಕೆ ಇರುವ ಕಾರಣ ಪೊಲೀಸ್ ರಕ್ಷಣೆ ಕೊಡಿಸುವಂತೆ ಕೋರಿದರು. ಈ ಸಂಬಂಧ ಗೃಹ ಸಚಿವರೊಂದಿಗೆ ಚರ್ಚಿಸಿ ಸೂಕ್ತ ರಕ್ಷಣೆ ಕೊಡುವ ಭರವಸೆಯನ್ನು ಬಿಎಸ್‍ವೈ ನೀಡಿದ್ದಾರೆ.
ಸಂತೋಷ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ. ಆತನನ್ನು ದುಷ್ಕರ್ಮಿಗಳು ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆಂಬುದು ತಿಳಿದಿಲ್ಲ. ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಸರ್ಕಾರಕ್ಕೆ ಒತ್ತಡ ಹಾಕಲಾಗುವುದು. ಅಲ್ಲದೆ ಕುಟುಂಬದವರಿಗೆ ಸೂಕ್ತ ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಪಕ್ಷದ ವತಿಯಿಂದ ಕುಟುಂಬದ ಸದಸ್ಯರಿಗೆ ಒಂದು ಲಕ್ಷ ರೂ. ಪರಿಹಾರ ನೀಡಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ , ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬುದಕ್ಕೆ ಸಂತೋಷ್ ಕಗ್ಗೊಲೆಯೇ ಸಾಕ್ಷಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಮಂಗಳೂರಿನಲ್ಲಿ ದಿಲೀಪ್ ರಾವ್ ಎಂಬ ಕಾರ್ಯಕರ್ತನನ್ನು ಕೊಲೆ ಮಾಡಲಾಗಿತ್ತು. ಈ ಸರ್ಕಾರದ ಅವಧಿಯಲ್ಲಿ ಇನ್ನೆಷ್ಟು ಹಿಂದು ಕಾರ್ಯಕರ್ತರು ಬಲಿಯಾಗುತ್ತಾರೆ ಎಂದು ಪ್ರಶ್ನಿಸಿದರು. ಕೆಲ ದುಷ್ಕರ್ಮಿಗಳು ಹಿಂದು ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಹಲ್ಲೆ ಮಾಡುತ್ತಿದ್ದಾರೆ. ಇಂಥವರಿಗೆ ಸರ್ಕಾರ ಕೂಡ ಕುಮ್ಮಕು ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಆರೋಪಿಗಳ ಪರ ಸರ್ಕಾರ ನಿಂತಿರುವುದು ಅತ್ಯಂತ ನೋವಿನ ಸಂಗತಿ. ಪಕ್ಕದ ಮನೆಗೆ ಬಂದು ಹೋಗಿದ್ದ ಸಿದ್ದರಾಮಯ್ಯನವರು ಸೌಜನ್ಯಕ್ಕಾದರೂ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿಲ್ಲ. ಇದು ಅವರ ದುರಹಂಕಾರವನ್ನು ತೋರಿಸುತ್ತದೆ ಎಂದು ಹರಿಹಾಯ್ದರು. ಇನ್ನು ಮೂರು ತಿಂಗಳು ಹೇಗೋ ಸಹಿಸಿಕೊಂಡು ಹೋಗಬೇಕು. ಇಂತಹ ದುರಹಂಕಾರದ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಎಂದೂ ನೋಡಿರಲಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಿದೆ ಎಂದು ಭರವಸೆ ಕೊಟ್ಟರು.
Comments