ರಾಜಕೀಯ ಎಂಟ್ರಿ ಬಗ್ಗೆ 'ರಾಕಿಂಗ್ ಸ್ಟಾರ್ ಹೇಳಿದ್ದೇನು ?

ನಟನೆ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳ ಮೂಲಕವೂ ಗುರುತಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರು, ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಮತ್ತೆ ಅವರ ರಾಜಕೀಯ ಪ್ರವೇಶದ ಕುರಿತಾಗಿ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾ ಮತ್ತು ರಾಜಕೀಯ ಬೇರೆ ಕ್ಷೇತ್ರಗಳಾದರೂ ಎರಡಕ್ಕೂ ಅವಿನಾಭಾವ ಸಂಬಂಧವಿದೆ. ಚಿತ್ರರಂಗದಲ್ಲಿ ಗುರುತಿಸಿಕೊಂಡವರು ರಾಜಕೀಯದಲ್ಲಿ, ರಾಜಕೀಯದಲ್ಲಿರುವವರು ಚಿತ್ರರಂಗದಲ್ಲಿ ಹಿಂದಿನಿಂದಲೂ ತೊಡಗಿಕೊಂಡಿದ್ದಾರೆ. ಚಿತ್ರರಂಗದಿಂದ ಬಂದ ಅನೇಕ ಕಲಾವಿದರು ರಾಜಕೀಯದಲ್ಲಿಯೂ ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಚಿತ್ರರಂಗದವರನ್ನು ಸೆಳೆಯಲು ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಿವೆ. ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಸ್ಥಾಪಿಸಿರುವ ಹೊಸ ಚಿಂತನೆಯ ರಾಜಕೀಯ ಪಕ್ಷಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಚಿತ್ರರಂಗದ ಇನ್ನೂ ಹಲವು ಸ್ಟಾರ್ ನಟರು ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಯಶ್ ರಾಜ್ಯದ ಹಲವೆಡೆ ಭೇಟಿ ನೀಡಿ ಕೆರೆ ಉಳಿಸುವ, ನೀರಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದೇ ವೇಳೆ ಅವರ ರಾಜಕೀಯ ಪ್ರವೇಶದ ಕುರಿತಾದ ಮಾತುಗಳೂ ಕೇಳಿ ಬಂದಿದ್ದು, ಎಂದಿನಂತೆಯೇ ರಾಜಕೀಯಕ್ಕೆ ಬರುವುದಿಲ್ಲ ಎಂದು ಯಶ್ ಪುನರುಚ್ಛರಿಸಿದ್ದಾರೆ. ಜನ ಸಮರ್ಥರನ್ನು ಆಯ್ಕೆ ಮಾಡಬೇಕು. ಅತ್ಯುತ್ತಮ ಜನಪ್ರತಿನಿಧಿಗಳು ಆಯ್ಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ನಾನು ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತೇನೆ. ಆದರೆ, ನಾನು ರಾಜಕೀಯಕ್ಕೆ ಬರುವುದಿಲ್ಲ. ನಟನಾಗಿದ್ದುಕೊಂಡೇ ಮಾಡಬೇಕಾದ ಕೆಲಸ ಮಾಡುತ್ತೇನೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
Comments