ಜೆಡಿಎಸ್ ಶಾಸಕ ಹೆಚ್.ಕೋನರೆಡ್ಡಿ ನೇತೃತ್ವದಲ್ಲಿ ಬೆಳಗಾವಿ-ಗೋವಾ ರಸ್ತೆ ತಡೆ

ಗೋವಾ ಸರ್ಕಾರದ ಸುಳ್ಳುಗಳನ್ನು ಬಹಿರಂಗಪಡಿಸಲು ನಾವಿಲ್ಲಿಗೆ ಬಂದಿದ್ದೇವೆ. ನಾವು ಸ್ಥಳವನ್ನು ಪರಿಶೀಲಿಸಿದ್ದು ಕರ್ನಾಟಕ ಸರ್ಕಾರ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ. ನಾಲೆ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಕೋನರೆಡ್ಡಿ ಹೇಳಿದರು.
ಕಳಸಾ-ಬಂಡೂರಿ ನಾಲೆ ಯೋಜನೆ ಜಾರಿಗೆ ಹೋರಾಡುತ್ತಿರುವವರಲ್ಲಿ ಮುಂಚೂಣಿಯಲ್ಲಿರುವ ಕೊಣರೆಡ್ಡಿ, ಕಣಕುಂಬಿಗೆ ಭೇಟಿ ನೀಡಿದ ಗೋವಾ ಸರ್ಕಾರದ ಜಲಸಂಪನ್ಮೂಲ ಸಚಿವ ವಿನೋದ್ ಪಾಳೇಕರ್ ಮತ್ತು ಸ್ಪೀಕರ್ ಪ್ರಮೋದ್ ಸಾವಂತ್ ಅವರ ಸುಳ್ಳು ಮತ್ತು ಮೋಸವನ್ನು ಬಹಿರಂಗಪಡಿಸಲು ತಾವು ಗ್ರಾಮ ವಾಸ್ತವ್ಯ ಹೂಡಿರುವುದಾಗಿ ತಿಳಿಸಿದರು. ಜೆಡಿಎಸ್ ಶಾಸಕ ಹೆಚ್.ಕೋನರೆಡ್ಡಿ ನೇತೃತ್ವದಲ್ಲಿ ರೈತರು ನಿನ್ನೆ ಕಣಕುಂಬಿ ಹತ್ತಿರ ಬೆಳಗಾವಿ-ಗೋವಾ ರಸ್ತೆಯನ್ನು ಒಂದು ಗಂಟೆಗೂ ಅಧಿಕ ಕಾಲ ತಡೆನಡೆಸಿದರು. ಇದರಿಂದ ಆ ಮಾರ್ಗದಲ್ಲಿ ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ದಟ್ಟಣೆಯುಂಟಾಯಿತು. ನವಲಗುಂದ, ನರಗುಂದ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಯ 300ಕ್ಕೂ ಅಧಿಕ ರೈತರು ಮೊನ್ನೆ ಬುಧವಾರ ರಾತ್ರಿ ಬಂದು ಕಣಕುಂಬಿ ಹತ್ತಿರ ಮೌಲಿ ದೇವಸ್ಥಾನದಲ್ಲಿ ರಾತ್ರಿ ಕಳೆದು ಮರುದಿನ ಬೆಳಗಾವಿ-ಗೋವಾ ಮಾರ್ಗದಲ್ಲಿ ರಸ್ತೆ ತಡೆ ನಡೆಸಿದರು. ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ವಿಫಲವಾಗಿವೆ ಎಂದು ಆರೋಪಿಸಿ ಘೋಷಣೆ ಕೂಗಿದರು.
Comments