ಸಿದ್ದರಾಮಯ್ಯ ಅವರು ದೇವೇಗೌಡರ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾದರೂ ಏಕೆ ?
ನಾನು ರಾಜಕಾರಣವನ್ನೇ ಬಿಟ್ಟುಬಿಡ್ತೀನಿ. ವಾಪಸ್ ಊರಿಗೆ ಹೋಗಿ ವಕೀಲಿಕೆ ಮಾಡಿಕೊಂಡು ಇರ್ತೀನಿ ಅಂದರು. ಆದರೆ ದೇವೇಗೌಡರು ಧೈರ್ಯ ಹೇಳಿದರು. ಮತ್ತೊಮ್ಮೆ ಒಳ್ಳೆ ಕಾಲ ಬರುತ್ತದೆ ಎಂಬ ವಿಶ್ವಾಸ ತುಂಬಿದರು'. ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಅವರು ರಾಜಕಾರಣ ಬಿಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾದರೂ ಏಕೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಮುಂದೆ ಓದಿ...
ಹೀಗೆ ಜೆಡಿಎಸ್, ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರ ಪಾಲಿನ ಸಂಕಷ್ಟದ ದಿನಗಳ ವಿಚಾರವನ್ನು ತಿಳಿಸಿದವರು ಕಡೂರು ಜೆಡಿಎಸ್ ಶಾಸಕ ಹಾಗೂ ದೇವೇಗೌಡರ ಆತ್ಮಚರಿತ್ರೆಗೆ ಅಕ್ಷರ ರೂಪ ನೀಡಿದ ವೈಎಸ್ ವಿ ದತ್ತ. ಆತ್ಮಚರಿತ್ರೆಯಲ್ಲಿ ಪ್ರಸ್ತಾವ ಆಗಿರುವ ಒಂದು ಘಟನೆ ಅಥವಾ ಪ್ರಮುಖ ಸನ್ನಿವೇಶದ ಬಗ್ಗೆ ತಿಳಿಸುವಂತೆ ಒನ್ಇಂಡಿಯಾ ಕನ್ನಡವು ದತ್ತ ಅವರನ್ನು ಸಂಪರ್ಕಿಸಿತು. ದೇವೇಗೌಡರ ಆತ್ಮಚರಿತ್ರೆಯೇ ಒಟ್ಟಾರೆ ಹಲವು ರೋಚಕ ಘಟನೆಗಳ ಸಂಕಲನ. ಈ ಬಗ್ಗೆ ವೈಎಸ್ ವಿ ದತ್ತ ಅವರ ವಿವರಿಸಿದರು. 1999ರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿತ್ತು. ದೇವೇಗೌಡರ ಆದಿಯಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯ ಎಲ್ಲ ಸೋತಿದ್ದರು. ಪಕ್ಷಕ್ಕೆ ಹತ್ತೇ ಸ್ಥಾನಗಳು ಬಂದಿದ್ದವು. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ಆ ಸೋಲಿನಿಂದ ಭಾರೀ ಕಂಗಾಲಾಗಿದ್ದರು. ದೇವೇಗೌಡರ ಬಳಿ ಬಂದು ಬಿಕ್ಕಿಬಿಕ್ಕಿ ಅತ್ತ ಅವರು, ರಾಜಕೀಯವನ್ನೇ ಬಿಡುವ ಮಾತನಾಡಿದರು. ಮತ್ತೆ ವಕೀಲಿಕೆ ಮಾಡ್ತೀನಿ, ಈ ರಾಜಕೀಯವೇ ಬೇಡ ಅಂದರು. ಆ ಚುನಾವಣೆಗೆ ನಮ್ಮ ಪಕ್ಷದ ಹೆಸರು ಜನತಾದಳ ಎಂಬುದರಿಂದ ಜೆಡಿಎಸ್ ಅಂತಾಗಿತ್ತು. ಪಕ್ಷದ ಚಿಹ್ನೆ ಬದಲಾಗಿತ್ತು. ಕಾಂಗ್ರೆಸ್ ಭಾರೀ ಬಹುಮತದಿಂದ ಗೆದ್ದು ಬಂದಿತ್ತು.
ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆದರು. ಪ್ರತಿಪಕ್ಷದ ಸ್ಥಾನ ಬಿಜೆಪಿ ಅವರ ಪಾಲಿಗೆ ಸಿಕ್ಕಿತು. ಈ ಎಲ್ಲ ಘಟನೆಗಳಿಂದ ಸಿದ್ದರಾಮಯ್ಯ ಅವರು ವಿಚಲಿತರಾಗಿದ್ದರು. ಅಂಥ ಸಮಯದಲ್ಲಿ ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದವರು ದೇವೇಗೌಡರು. ಬಾಡಿಗೆ ಮನೆಯೊಂದನ್ನು ಮಾಡಿ, ಅದರ ಖರ್ಚು-ವೆಚ್ಚ ಪಕ್ಷದಿಂದ ನೋಡಿಕೊಳ್ಳಲಾಗುತ್ತದೆ. ಈಗಿನ ಸೋಲು ತಾತ್ಕಾಲಿಕ. ಮುಂದೆ ನಮಗೆ ಜಯವಿದೆ ಎಂದು ವಿಶ್ವಾಸ ತುಂಬಿದವರು ದೇವೇಗೌಡರು. ದೇವೇಗೌಡರು ಪ್ರಧಾನಮಂತ್ರಿ ಆದಾಗ ಜೆ.ಎಚ್.ಪಟೇಲ್ ರನ್ನು ಮುಖ್ಯಮಂತ್ರಿ ಮಾಡಿ, ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಮಾಡಿದರು. ಆದರೆ ಆಗಲೇ ತನ್ನನ್ನು ಮುಖ್ಯಮಂತ್ರಿ ಮಾಡಲಿಲ್ಲ ಅನ್ನೋದು ಸಿದ್ದರಾಮಯ್ಯ ಅವರ ಅಸಮಾಧಾನ ಹಾಗೂ ಆಕ್ಷೇಪ ಆಗಿತ್ತು. ಜೆ.ಎಚ್.ಪಟೇಲ್ ಹಿರಿಯರಿದ್ದರು ಹಾಗೂ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ಪಕ್ಷದಲ್ಲಿನ ಲಿಂಗಾಯತ ಶಾಸಕರಿಗೆ ಅಸಮಾಧಾನ ಆಗುವ ಸಾಧ್ಯತೆ ಇತ್ತು. ಆದ್ದರಿಂದ ದೇವೇಗೌಡರು ಅಂಥ ತೀರ್ಮಾನ ಕೈಗೊಳ್ಳಬೇಕಾಯಿತು. ಆದರೆ ಸಿದ್ದರಾಮಯ್ಯ ಬೆಳವಣಿಗೆಯಲ್ಲಿ ದೇವೇಗೌಡರ ಪಾತ್ರ ಯಾವ ಮಟ್ಟದ್ದು ಅನ್ನೋದು ಕೂಡ ಆತ್ಮಚರಿತ್ರೆಯಿಂದ ಗೊತ್ತಾಗುತ್ತದೆ.
Comments