ಚುನಾವಣಾ ಪ್ರಚಾರಕ್ಕೆ 'ಮೆಗಾಸ್ಟಾರ್' ರನ್ನು ಕರೆತರಲು ಮುಂದಾದ ಕೈ ಶಾಸಕರು …!!



ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಾರಾ ರಂಗಿನ ಅಬ್ಬರದ ಪ್ರಚಾರ ನಡೆಯಲಿದೆ. ಪವನ್ ಕಲ್ಯಾಣ್ ಕರೆತರುವ ಜೆಡಿಎಸ್ ಪ್ಲಾನ್‌ಗೆ ಪ್ರತಿಯಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮೆಗಾಸ್ಟಾರ್ ಚಿರಂಜೀವಿಯನ್ನು ಪ್ರಚಾರಕ್ಕೆ ಕರೆತರಲು ಸಿದ್ಧತೆ ನಡೆಸಿದೆ.
ಹೌದು, ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ವಾರ್‌ಗೆ ವೇದಿಕೆ ಸಜ್ಜಾಗುತ್ತಿದೆ. ಆಂಧ್ರಪ್ರದೇಶ ಜನಪ್ರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ಚಿರಂಜೀವಿ ಅವರನ್ನು ರಾಜ್ಯಕ್ಕೆ ಕರೆತಂದು ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಬಳಸಿಕೊಳ್ಳಲು ಕೆಪಿಸಿಸಿ ನಿರ್ಧರಿಸಿದೆ. ಚಿರಂಜೀವಿಗೆ ಕರ್ನಾಟಕದ ಕೆಲ ಭಾಗಗಳಲ್ಲಿ ಮಾಸ್ ಫಾಲೋಯಿಂಗ್ ಇದೆ. ಅಂತಹ ಕಡೆ ಅವರ ವರ್ಚಸ್ಸನ್ನು ಮತವಾಗಿ ಪರಿವರ್ತಿಸಿಕೊಂಡರೆ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ ಎನ್ನುವ ಲೆಕ್ಕಾಚಾರ ಕೈ ನಾಯಕರದ್ದಾಗಿದೆ.ಹೈದ್ರಾಬಾದ್ ಕರ್ನಾಟಕ, ಬೆಂಗಳೂರು, ಕೋಲಾರ ಚಿಕ್ಕಬಳ್ಳಾಪುರ ಸೇರಿದಂತೆ ತೆಲುಗು ಭಾಷಿಕರು ಹೆಚ್ಚಿರುವ ಜಿಲ್ಲೆಗಳ ಕ್ಷೇತ್ರಗಳ ಪ್ರಚಾರದಲ್ಲಿ ಚಿರಂಜೀವಿ ಅವರನ್ನು ಉಪಯೋಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಆ ಮೂಲಕ ಪಕ್ಷದ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ತಂತ್ರಗಾರಿಕೆ ರೂಪಿಸುತ್ತಿದೆ.
ಚಿರಂಜೀವಿ ಅವರನ್ನು ರಾಜ್ಯ ಚುನಾವಣಾ ಪ್ರಚಾರಕ್ಕೆ ಕರೆತರುವ ಜವಾಬ್ದಾರಿಯನ್ನು ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್‌ಗೆ ವಹಿಸಲಾಗಿದೆ ಎನ್ನುವ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಕೇಳಿಬಂದಿವೆ. ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಈ ಸಂಬಂಧ ಅಂಬರೀಶ್ ಜೊತೆ ಮಾತುಕತೆ ನಡೆಸಿದ್ದು, ಇದಕ್ಕೆ ಅಂಬಿ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.ಚಿರಂಜೀವಿ ಅವರ ಹಲವು ರಾಜಕೀಯ ನಿರ್ಧಾರಗಳ ಹಿಂದೆ ಅಂಬರೀಶ್ ಇದ್ದು, ಇಬ್ಬರೂ ಉತ್ತಮ ಸ್ನೇಹಿತರು. 2013 ರಲ್ಲಿಯೂ ಬೆಂಗಳೂರಿನಲ್ಲಿ ಪ್ರಚಾರ ಮಾಡಿದ್ದರು. ಜೆಡಿಎಸ್ ನಾಯಕರು ಪವನ್ ಕಲ್ಯಾಣ್ ಹಿಂದೆ ಬಿದ್ದಿರುವುದರಿಂದ ಕಾಂಗ್ರೆಸ್ ನಾಯಕರು ಚಿರಂಜೀವಿ ಕರೆತರಲು ನಿರ್ಧರಿಸಿದ್ದಾರೆ. ಆ ಮೂಲಕ ಪವನ್ ಸೆಳೆಯುವ ಮತಗಳಿಗೆ ಪ್ರತಿಯಾಗಿ ಚಿರಂಜೀವಿ ಮೂಲಕ ಮತ ಗಳಿಕೆಗೆ ಈ ತಂತ್ರ ಹೆಣೆಯಲಾಗಿದೆ ಎನ್ನಲಾಗಿದೆ.
Comments