ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸುಳಿವು ಕೊಟ್ಟ ನಿಖಿಲ್ ಕುಮಾರಸ್ವಾಮಿ

ಹುಟ್ಟಹಬ್ಬದ ಸಂಭ್ರಮದಲ್ಲಿರುವ ನಿಖಿಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ 'ನನ್ನ ಅಧಿಕೃತ ರಾಜಕೀಯ ಪ್ರವೇಶದ ಬಗ್ಗೆ ಈಗಲೇ ಹೇಳಲಾರೆ, ಅದು ನನ್ನ ಕೈಯಲ್ಲಿಲ್ಲ' ಎಂದು ಹೇಳುವ ಮೂಲಕ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ನಿರ್ಣಯಕ್ಕೆ ಕಾಯುತ್ತಿರುವುದಾಗಿ ಸುಳಿವು ನೀಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬಧಂದು ತಮಗೆ ರಾಜಕೀಯ ಪ್ರವೇಶದ ಬಗ್ಗೆ ಆಸಕ್ತಿಯಿರುವುದಾಗಿ ಸುಳಿವು ನೀಡಿದ್ದಾರೆ. 'ಪ್ರಸ್ತುತ ತಂದೆ ಕುಮಾರಸ್ವಾಮಿ ಅವರ ರಾಜಕೀಯಕ್ಕೆ ಸಹಾಯಕನಾಗಿ ದುಡಿಯುತ್ತೇನೆ' ಎಂದಿರುವ ನಿಖಿಲ್ ಪರೋಕ್ಷವಾಗಿ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ, ಹಾಗೂ ರಾಜ್ಯ ರಾಜಕಾರಣವನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ ಎಂದಿದ್ದಾರೆ. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸ್ಥಾನ ಅಲಂಕರಿಸಿರುವ ಸಹೋದರ, ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ರಾಜ್ಯ ಜೆಡಿಎಸ್ ನಲ್ಲಿ ಛಾಪು ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ, ಹಾಗಾಗಿ ನಿಖಿಲ್ ಕುಮಾರಸ್ವಾಮಿ ಅವರೂ ಕೂಡ ರಾಜಕೀಯ ಪ್ರವೇಶಿಸುತ್ತಾರೆಂಬ ಊಹಾಪೋಹ ಹರಿದಾಡುತ್ತಿದೆ. ಈಗಾಗಲೇ ನಿಖಿಲ್ ಅವರು ತಂದೆಯವರೊಟ್ಟಿಗೆ ಕೆಲವು ಬಹಿರಂಗ ಸಮಾವೇಶಗಳಲ್ಲಿ ಕಾಣಿಸಿಕೊಂಡಿದ್ದು, ಜೆಡಿಎಸ್ ಸ್ಟಾರ್ ಪ್ರಚಾರಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಉದಯೋನ್ಮುಖ ತಾರೆಯಾಗಿ ಗುರುತಿಸಿಕೊಂಡಿರುವ ನಿಖಿಲ್ ಅವರು ರಾಜಕಾರಣದಲ್ಲಿ ಯಾವ ರೀತಿಯ ಮೋಡಿ ಮಾಡುತ್ತಾರೊ ನೋಡಬೇಕಿದೆ.
Comments