ಫೆಬ್ರವರಿಯಲ್ಲಿ ಜೆಡಿಎಸ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಗಾಗಿ ಜಾಥಾ: ದೇವೇಗೌಡ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳಿಂದೀಚೆಗೆ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸಾಮರಸ್ಯಕ್ಕಾಗಿ ನಡಿಗೆ (ರ್ಯಾಲಿ)ಯನ್ನು ಫೆಬ್ರವರಿ ಎರಡನೆ ವಾರದಲ್ಲಿ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷ ಅಷ್ಟೊಂದು ಪ್ರಬಲವಾಗಿಲ್ಲ. ಆದರೆ ಬಲಿಷ್ಠಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ 324 ಕ್ಷೇತ್ರಗಳಲ್ಲಿಯೂ ಜೆಡಿಎಸ್ ನ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಕೆಲವೊಂದು ಕಡೆ ಎಡ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ದೇವೇಗೌಡ ಹೇಳಿದರು. ಮಹಾದಾಯಿ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಹೋಗಿದ್ದೆ. 1996ರಲ್ಲಿ ಮಹಾದಾಯಿ ಪ್ರಕರಣಕ್ಕೆ ಸಂಬಂಧಿಸಿ ದೊರಕಿರುವ ಆದೇಶದ ಪ್ರತಿ ಅವರ ಮುಂದಿರಿಸಿ ಸಮಸ್ಯೆಗೆ ಪರಿಹಾರ ನೀಡಿ ಎಂದು ಮನವಿ ಮಾಡಿದೆ. ಆದರೆ ನಾನು ಎಷ್ಟೇ ಮಾತನಾಡಿದರೂ ಅವರು ವೌನವಾಗಿದ್ದರು ಎಂದು ದೇವೇಗೌಡ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಜಿಲ್ಲೆಯಲ್ಲಿ ಮಾತ್ರವಲ್ಲದೆ, ರಾಜ್ಯದಲ್ಲಿ ಮತೀಯ ಹಿಂಸೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಪಕ್ಷದ ಪ್ರಣಾಳಿಕೆಯಲ್ಲಿ ಪಕ್ಷದ ಭರವಸೆಗಳನ್ನು ತಿಳಿಸುವುದಾಗಿ ಹೇಳಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿ ಕುಂದಿದೆ ಎಂಬುದು ಅವರ ಹೇಳಿಕೆಗಳಿಂದಲೇ ಸ್ಪಷ್ಟವಾಗುತ್ತಿದೆ. ಈ ಹಿಂದಿನಂತೆ ಬಹುಮತದೊಂದಿಗೆ ಗೆದ್ದು ಅಧಿಕಾರ ನಡೆಸುತ್ತೇನೆ ಎಂಬ ರೋಷ ಈಗ ಅವರಲ್ಲಿಲ್ಲ. ಕಾಂಗ್ರೆಸ್ ಶಕ್ತಿ ಕುಂದುತ್ತಿರುವುದು ಅವರಿಗೂ ಮನವರಿಕೆಯಾಗಿದೆ. ಪ್ರತಿ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿಯಿದೆ. ಕರಾವಳಿಯಲ್ಲೂ ಈ ಹಿಂದೆ ನಾವು ಗೆಲುವು ಸಾಧಿಸಿದ್ದೆವು. ಈ ಬಾರಿಯೂ ಗೆಲುವಿಗೆ ವಿಶೇಷ ಒತ್ತು ನೀಡಿದ್ದೇವೆ ಎಂದು ದೇವೇಗೌಡ ಹೇಳಿದರು.
Comments