ಮದ್ಯ ಭಾಗ್ಯ ಕೊಟ್ಟಿರುವವರು ಯಾರು ಸಿಎಂಗೆ ಎಚ್ ಡಿಕೆ ಪ್ರಶ್ನೆ ..?

22 Jan 2018 11:35 AM | Politics
420 Report

ಸಿದ್ದರಾಮಯ್ಯ ತಾವು ಎಲ್ಲ ಭಾಗ್ಯಗಳನ್ನು ಕೊಟ್ಟಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಆದ್ರೆ ಮದ್ಯ ಭಾಗ್ಯ ಕೊಟ್ಟಿರುವವರು ಯಾರು? ಇದರ ಬಗ್ಗೆ ಯಾಕೆ ಮಾತನಾಡುವುದಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿಯವರು ಪ್ರಶ್ನಿಸಿದರು. ಇನ್ನು ಸರ್ಕಾರದಿಂದ ಸಾರಾಯಿ ಮಾರುವುದನ್ನು ನಿಲ್ಲಿಸಬೇಕು. ನಾನು ಮಹಿಳೆಯರ ಒತ್ತಾಯಕ್ಕೆ ಮಣಿದು ಸರಾಯಿ ನಿಷೇಧ ಮಾಡಿದ್ದೇನೆ ಎಂದರು.

ಮಾತಿಗೊಮ್ಮೆ ಸಿದ್ದರಾಮಯ್ಯ ನಾನು ಪುಕ್ಕಟೆ ಅಕ್ಕಿ ಕೊಟ್ಟಿದ್ದೇನೆ ಎಂದು ಹೇಳ್ತಾರೆ. ಆದ್ರೆ ಅವರು ಅಕ್ಕಿ ಕೊಡುವ ಮುಂಚೆ ಯಾರೂ ಉಪವಾಸ ಇದ್ದರಾ ಎಂದು ಪ್ರಶ್ನೆ ಮಾಡಿದರು. ನಾನು ಎಷ್ಟು ದಿನ ಬದುಕುತ್ತೇನೆ ಎನ್ನುವುದು ಗೊತ್ತಿಲ್ಲ. ನಾನು ಇಸ್ರೇಲ್ ಪ್ರವಾಸಕ್ಕೆ ಹೋಗಿದ್ದ ವೇಳೆಯಲ್ಲಿಯೇ ಸಾಯಬೇಕಿತ್ತು. ಆದ್ರೆ, ನಿಮ್ಮ ಆರ್ಶೀರ್ವಾದಿಂದ ಎರಡನೇ ಬಾರಿ ಜನ್ಮ ಎತ್ತಿ ಬಂದಿದ್ದೇನೆ. ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಸಹ ಇಸ್ರೇಲ್ ಪ್ರವಾಸ ಮಾಡಿ ಕೃಷಿ ಅಧ್ಯಯನ ಮಾಡಿದ್ದೇನೆ ಎಂದರು. 2004 ರಲ್ಲಿ ಬಿಜೆಪಿಯಿಂದ ಕರಡಿ ಸಂಗಣ್ಣ ಸೋಲುಂಡಿದ್ದರು. ಬಳಿಕ ನನ್ನ ಜೊತೆಗೆ ಬಂದು ಅಧಿಕಾರ ಅನುಭವಿಸಿದರು ಎಂದರು. ಇನ್ನು ನಾನು ಸಿಎಂ ಆಗಿದ್ದ ವೇಳೆಯಲ್ಲಿ ಪೊಲೀಸರ ರಕ್ಷಣೆಯಲ್ಲಿ ಕೆಲಸ ಮಾಡಲಿಲ್ಲ. ಬದಲಾಗಿ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದೇನೆ ಎಂದರು. ಇನ್ನು ಯಡಿಯೂರಪ್ಪಗೆ ಮೋಸ ಮಾಡಿದ್ದೇನೆ ಎಂದು ಹೇಳಿಕೊಂಡು ಓಡಾಡಿದರು. ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿನೂ ಆದರು. ಆದ್ರೆ ಅವರು ಮಾಡಿದ್ದು ಏನು ಅಂತ ನಿಮಗೆ ಗೊತ್ತಿದೆ. ಜೊತೆಗೆ ನೀವು ಎಲ್ಲಾ ರಾಜಕಾರಣಿಗಳನ್ನು ನೋಡಿದ್ದೀರಿ. ನಾನು ಅಧಿಕಾರವದಿಯಲ್ಲಿ ಏನೇನು ಮಾಡಿದ್ದೇನೆ ಎಂದು ನೋಡಿದ್ದೀರಿ. ಹೀಗಾಗಿ ನನಗೆ 113 ಜನ ಶಾಸಕರನ್ನು ಕೊಡಿ, ನಿಮ್ಮನ್ನು ಉಳಿಸುತ್ತೇನೋ ಇಲ್ಲವೋ ನೋಡಿ ಎಂದು ಮನವಿ ಮಾಡಿದರು.  ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ವೆಂಕಟರಾವ್ ನಾಡಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Edited By

Shruthi G

Reported By

Madhu shree

Comments