ಜೆಡಿಎಸ್-ಕಾಂಗ್ರೆಸ್ ತೊರೆದ 700ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಮಡಿಕೇರಿ: ಮೂಲ ಜನತಾದಳದ ನಾಯಕರ ಮುನಿಸು, ಪಕ್ಷದಲ್ಲಿ ಎದ್ದಿರುವ ಅಸಮಾಧಾನದ ಬೇಗುದಿ, ಕಾರ್ಯಕರ್ತರ ವಲಸೆ ಇತ್ಯಾದಿ ಕಾರಣಗಳಿಂದ ಕೊಡಗು ಜೆಡಿಎಸ್‍ನಲ್ಲಿ ದಿನೇ ದಿನೇ ಭಿನ್ನಮತ ಸ್ಫೋಟಗೊಳ್ಳುತ್ತಲೇ ಇದೆ.
ಇದೀಗ ಪ್ರಮುಖ ನಾಯಕರು ಸೇರಿದಂತೆ ನೂರಾರು ಮಂದಿ ಬಿಜೆಪಿ ಸೇರ್ಪಡೆಯಾಗುವ ಮೂಲಕ ಜೆಡಿಎಸ್‍ನ ಜಂಘಾಬಲವೇ ಉಡುಗಿದಂತಾಗಿದೆ. ಸೋಮವಾರಪೇಟೆ ಜೇಸಿ ವೇದಿಕೆಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತೊರೆದ ಸುಮಾರು 700ಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.ಇದಕ್ಕೂ ಮುನ್ನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ, ವಿವೇಕಾನಂದ ವೃತ್ತದಿಂದ ಜೇಸಿ ವೇದಿಕೆವರೆಗೆ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ರಂಜನ್, ಮುಖಂಡರಾದ ಕಾಳನ ರವಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಜಯ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಜೆಡಿಎಸ್ ತೊರೆದಿರುವ ಎಸ್.ಬಿ.ಭರತ್ ಕುಮಾರ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ್, ಮಾಜಿ ಸದಸ್ಯೆ ಎನ್.ಎಸ್. ಗೀತಾ, ಯುವ ಜೆಡಿಎಸ್ ಮಾಜಿ ಅಧ್ಯಕ್ಷ ಅಜೀಶ್ ಕುಮಾರ್, ಯೋಗೇಶ್ ಕುಮಾರ್, ರಾಮಕೃಷ್ಣ ಸೇರಿದಂತೆ 400ಕ್ಕೂ ಅಧಿಕ ಕಾರ್ಯಕರ್ತರು ಪ್ರತ್ಯೇಕ ಮೆರವಣಿಗೆ ನಡೆಸಿ ತಮ್ಮ ಬಣದ ಶಕ್ತಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು.ಡಿ.ವಿ.ಸದಾನಂದ ಗೌಡ, ಸಿ.ಟಿ.ರವಿ, ಸಂಸದ ಪ್ರತಾಪ್ ಸಿಂಹ, ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಪ್ರಮುಖರಾದ ಕೆ.ಜಿ.ಸುರೇಶ್, ಸೋಮೇಶ್ ಮತ್ತಿತರರು ಹಾಜರಿದ್ದರು.
Comments