ಬಿಜೆಪಿಯ ಮತ್ತೊಂದು ವಿಕೆಟ್ ಜೆಡಿಎಸ್ ಪಾಲು
ಬಿಜೆಪಿಗೆ ವಿದಾಯ ಹೇಳಿ ಜ. 15 ರಂದು ಜೆಡಿಎಸ್ ಸೇರ್ಪಡೆಯಾಗಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಕಾರವಾರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅವರ ಜೊತೆ ಸೇರಿ ಭರ್ಜರಿ ರೋಡ್ ಶೋ ಮಾಡಿದರು.ಇದೇ ವೇಳೆ ಬಿಜೆಪಿ ತೊರೆದ ಪೂರ್ಣಿಮಾ ಮಹೇಕರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ ಅವರು, ಕಾರವಾರದಲ್ಲಿ ಜೆಡಿಎಸ್‍ಗೆ ಕೇವಲ 5 ದಿನಗಳಲ್ಲಿ ಸಿಕ್ಕ ಬೆಂಬಲ ನೋಡಿದರೆ ಮನಸು ತುಂಬಿ ಬಂದಿದೆ. ಬಂಗಾರಪ್ಪಜೀ ಮತ್ತು ವಸಂತ ಅಸ್ನೋಟಿಕರ್ ಅವರ ಸ್ನೇಹ ಇನ್ನು ಗಟ್ಟಿಯಾಗಿದೆ. ಮಾಜಿ ಸಚಿವ ಆನಂದ್ ಅವರು ಬಿಜಿಪಿ ಸಹವಾಸ ಬಿಟ್ಟು ಐದು ದಿನವಾಗಿದೆ. ಅವರಿಗೆ ಇಷ್ಟೊಂದು ಬೆಂಬಲ ಕ್ಷೇತ್ರದಲ್ಲಿ ಇರುವುದು ನೋಡಿದರೆ ಜೆಡಿಎಸ್ ವಿಜಯೋತ್ಸವ ಆಚರಿಸಿದ ಸಂತೋಷ ನನಗಾಗಿದೆ. ಕಾರವಾರ ಮತ್ತು ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಿಕೊಡಿ. ಜನವಿರೋಧಿ ಬಿಜೆಪಿ,ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿ ಎಂದು ಮಧು ಬಂಗಾರಪ್ಪ ಯುವಕರಿಗೆ ಕರೆ ನೀಡಿದರು.
ಹಾಲಿ ಶಾಸಕರು ಜನ ವಿರೋಧಿಯಾಗಿದ್ದಾರೆ. ಅವರ ಬಗ್ಗೆ ಸಾಕಷ್ಟು ದೂರುಗಳಿವೆ. ಇದಕ್ಕೆ ಇಲ್ಲಿನ ಯುವಕರು ಸಾಕ್ಷಿ ಎಂದರು. ಕಾರವಾರದಲ್ಲಿ ಅಸ್ನೋಟಿಕರ್ ಅವರನ್ನು ಗೆಲ್ಲಿಸಿಕೊಡಿ. ಕುಮಾರಸ್ವಾಮಿಯನ್ನು ಸಿಎಂ ಮಾಡಲು ನೆರವಾಗಿ. ಈ ಜಿಲ್ಲೆಯಲ್ಲಿ ಶಾಂತಿ ಮತ್ತು ಅಭಿವೃದ್ಧಿಯನ್ನು ತರುತ್ತೇವೆ. ಮತೀಯ ದ್ವೇಷ ಬಿತ್ತುವ ಸಂಸದ ಅನಂತಕುಮಾರ್ ಹೆಗಡೆಗೆ ಪಾಠ ಕಲಿಸಿ ಎಂದು ಮಧು ಬಂಗಾರಪ್ಪ ಹೇಳಿದರು. ಚಿತ್ತಾಕುಲಾ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ತಾಂಡೇಲ, ಕಡವಾಡದ ಮಾರುತಿ ನಾಯ್ಕ ಸೇರಿದಂತೆ ಯುವಕರ ಪಡೆ ಆನಂದ ಅಸ್ನೋಟಿಕರ್, ಮಧು ರೋಡ್ ಶೋನಲ್ಲಿ ಭಾಗವಹಿಸಿದ್ದರು. ಜೆಡಿಎಸ್ ಮುಖಂಡರಾದ ಪ್ರದೀಪ್ ನಾಯಕ, ಶಶಿಭೂಷಣ ಹೆಗಡೆ ಸಹ ಇದ್ದರು.
Comments