ಕಾಂಗ್ರೆಸ್ ನ ಹಿರಿಯ ಮುಖಂಡ ಸೇರಿದಂತೆ ಅನೇಕರು ಜೆಡಿಎಸ್ ಸೇರ್ಪಡೆ...!!

ನೇಪಥ್ಯಕ್ಕೆ ಸರಿದಿರುವ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಜಿ. ರಾಮುಲು ಜೆಡಿಎಸ್ ಪಕ್ಷ ಸೇರುತ್ತಾರೆ ಎನ್ನುವ ಮಾತು ನಿಜವಾಗುತ್ತಿದೆ. ಈ ವಿಚಾರವನ್ನು ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಯೊಂದು ಶೀಘ್ರದಲ್ಲಿಯೇ ನಡೆಯಲಿದ್ದು, ಮಾಜಿ ಸಂಸದ ರಾಮುಲು ಸೇರಿದಂತೆ ಅನೇಕರು ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಬೃಹತ್ ಸಮಾವೇಶ ನಡೆಯಲಿದೆ. ಅಂದು ಬೇರೆ ಬೇರೆ ಪಕ್ಷದ ಮುಖಂಡರು ಮೊದಲ ಹಂತದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಸುಳಿವು ನೀಡಿದರು.
ಎರಡನೇ ಹಂತದಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ ಎಚ್.ಜಿ.ರಾಮುಲು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಹೆಚ್.ಆರ್. ಶ್ರೀನಾಥ್, ಕರಿಯಣ್ಣ ಸಂಗಟಿ ಸೇರಿದಂತೆ ಅವರ ಬೆಂಬಲಿಗರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ. ಪಕ್ಷ ಸೇರ್ಪಡೆ ಕುರಿತಂತೆ ಎಚ್.ಡಿ. ದೇವೇಗೌಡ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಇದರಿಂದಾಗಿ ನಮ್ಮ ಪಕ್ಷಕ್ಕೆ ಮತ್ತಷ್ಟು ಬಲಬರಲಿದೆ ಎಂದರು.
ಈ ಹಿಂದೆ ಜಿಲ್ಲೆಯಲ್ಲಿ ಪಕ್ಷ ಅತ್ಯಂತ ಪ್ರಬಲವಾಗಿತ್ತು. ಅದೇ ಸನ್ನಿವೇಶವೂ ಈಗ ಸೃಷ್ಟಿಯಾಗಲಿದೆ ಎಂದು ಹೇಳಿದರು.ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದು ಜೆಡಿಎಸ್ ಪಕ್ಷದ ಕಡೆಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಮಹದಾಯಿ, ಕಾವೇರಿ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಡವಿವೆ. ಹೀಗಾಗಿ, ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಪಕ್ಷವನ್ನು ಜನ ಬೆಂಬಲಿಸಲಿದ್ದಾರೆ ಎಂದರು. ಪಕ್ಷದ ಉಸ್ತುವಾರಿ ಸಿ.ಎಂ. ನಾಗರಾಜ್, ಜಿಲ್ಲಾಧ್ಯಕ್ಷ ಪ್ರದೀಪಗೌಡ ಪಾಟೀಲ್, ಕಾರ್ಯಾಧ್ಯಕ್ಷ ವೀರೇಶ್ ಮಹಾಂತಯ್ಯನಮಠ, ಜಿಲಾನ್ ಮೈಲೈಕ್, ವಕ್ತಾರ ಮೌನೇಶ್ ವಡ್ಡಟ್ಟಿ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Comments