ಚಿತ್ರದುರ್ಗ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಕುಮಾರಣ್ಣ
ಕೊಪ್ಪಳ: ಉದ್ಯಮಿ ಕೆ.ಸಿ. ವೀರೇಂದ್ರ ಚಿತ್ರದುರ್ಗದ ಜೆಡಿಎಸ್ ಅಭ್ಯರ್ಥಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಕೊಪ್ಪಳದಲ್ಲಿ ಘೋಷಣೆ ಮಾಡಿದರು.
ಚಿತ್ರದುರ್ಗ ಕ್ಷೇತ್ರದ ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ಕೆ.ಸಿ. ರವೀಂದ್ರ ತಮ್ಮ ಅಪಾರ ಬೆಂಬಲಿಗರೊಂದಿಗೆ ಇಂದು ಕೊಪ್ಪಳಕ್ಕೆ ಬಂದಿದ್ದರು. ನಗರದ ಹೊರವಲಯದಲ್ಲಿ ಅಪಾರ ಬೆಂಬಲಿಗರೊಂದಿಗೆ ಬೀಡುಬಿಟ್ಟಿದ್ದ ಕೆ.ಸಿ. ವೀರೇಂದ್ರ ಅವರು ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, 10 ವರ್ಷದ ಹಿಂದೆಯೇ ಯೋಚಿಸಿದಂತೆ ತಾವು ಈ ಬಾರಿ ಅಧಿಕಾರಕ್ಕೆ ಬಂದರೆ ನೀರಾವರಿ ಸೌಲಭ್ಯ ಒದಗಿಸುವುದು ನನ್ನ ಮೊದಲ ಆದ್ಯತೆ ಎಂದರು. ಅಲ್ಲದೆ, ಚಿತ್ರದುರ್ಗದ ಅಭ್ಯರ್ಥಿ ಕೆ.ಸಿ. ವೀರೇಂದ್ರ. ಅವರಿಗೆ ಚಿತ್ರದುರ್ಗದ ಮತದಾದರು ಆಶೀರ್ವದಿಸಬೇಕು.
ಚಿತ್ರದುರ್ಗ ಕ್ಷೇತ್ರದಲ್ಲಿ ನಾವು ಗೆಲ್ಲಲೇಬೇಕಾಗಿದೆ. ಕಾಂತರಾಜು ಅವರನ್ನು ನಾವು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದುಕೊಂಡಿದ್ದೆವು. ಆದರೆ, ಸ್ವತಃ ಕಾಂತರಾಜು ಅವರೇ ಬೇಡ ಎಂದು ಹೇಳಿದ್ದಾರೆ. ಅಲ್ಲದೆ, ಕಾಂತರಾಜು ಸೇರಿದಂತೆ ಅಲ್ಲಿನ ಮುಖಂಡರು ಚರ್ಚೆ ನಡೆಸಿ ಒಂದು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ಚಿತ್ರದುರ್ಗದಲ್ಲಿ ಕೆ.ಸಿ. ವೀರೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಅವರ ಅಭಿಪ್ರಾಯ ಮತ್ತು ನಿರ್ಧಾರದಂತೆ ಕೆ.ಸಿ. ವೀರೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗುತ್ತಿದೆ ಎಂದರು.
ಶಾಸಕ ಮಾನಪ್ಪ ವಜ್ಜಲ್ ಸೇರಿದಂತೆ ಅನೇಕರು ಪಕ್ಷ ಬಿಟ್ಟು ಹೋಗುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂತರಾಜು ಅವರು, ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಉದ್ದೇಶದಿಂದ ನಾನು ಹಿಂದೆ ಸರಿಯುತ್ತಿದ್ದೇನೆ. ಅಭ್ಯರ್ಥಿ ಕೆ.ಸಿ. ವೀರೇಂದ್ರ ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಜೆಡಿಎಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
Comments