ರಾಷ್ಟ್ರೀಯ ಪಕ್ಷಗಳು ಏನೇ ಆಪರೇಷನ್ ಮಾಡಿದರು ಅಧಿಕಾರಕ್ಕೆ ಬರಲ್ಲ : ಎಚ್ ಡಿಕೆ ಭವಿಷ್ಯ

ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು, ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆ ಇದೆ ಹಾಗಾಗಿ ಗಾಳ ಹಾಕಿಕೊಂಡು ಕೂತಿದ್ದಾರೆ. ಅವರೆಷ್ಟೇ ಪ್ರಯತ್ನಪಟ್ಟರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಶಸ್ಸು ಸಾಧಿಸುವುದಿಲ್ಲ ಎಂದರು. ಆಪರೇಷನ್ ಕಮಲಾ-ಆಪರೇಷನ್ ಹಸ್ತ ಎಂದು ರಾಷ್ಟ್ರೀಯ ಪಕ್ಷಗಳು ಎಷ್ಟೇ ಆಪರೇಷನ್ ನಡೆಸಿದರೂ ಮುಂದಿನ ಚುನಾವಣೆಯಲ್ಲಿ ಯಶಸ್ಸು ದೊರಕುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್‍ನಿಂದ ಹೈಕಮಾಂಡ್‍ಗೆ ದೇಣಿಗೆ ಹೋಗುತ್ತಿದೆ ಎಂಬ ವಿಚಾರವನ್ನು ನಾನು ಹೇಳಲಿಲ್ಲ. ರಮೇಶ್‍ಕುಮಾರ್ ಅವರು ಸಚಿವರಾಗುವ ಮುನ್ನ ಆರೋಪ ಮಾಡಿದ್ದರು. ಅದೆಲ್ಲವೂ ಮಾಧ್ಯಮದಲ್ಲೇ ಬಂದಿತ್ತು ಎಂದು ಹೇಳಿದರು. ಬೆಂಗಳೂರಿನಿಂದ ದೆಹಲಿಗೆ ಅರ್ಧಗಂಟೆಗೊಮ್ಮೆ ವಿಮಾನವಿದ್ದರೂ ಎಚ್‍ಎಎಲ್‍ನ ವಿಶೇಷ ವಿಮಾನದಲ್ಲಿ ಏಕೆ ದೆಹಲಿಗೆ ಹೋಗುತ್ತಾರೆ? ಯಾರು ದೆಹಲಿಗೆ ಹೋಗುತ್ತಾರೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ ಹೋಗುತ್ತಾರೆಯೇ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಸತ್ಯ ಹೇಳುತ್ತಾರೆ. ವಿರೋಧ ಪಕ್ಷದವರೆಲ್ಲ ಸುಳ್ಳು ಹೇಳುತ್ತಾರೆ ಎಂದು ಬಿಂಬಿಸಲಾಗುತ್ತಿದೆ ಎಂದು ಆರೋಪಿಸಿದರು.
Comments