ಕಮಲ ಹಿಡಿಯಲು ಸಿದ್ಧರಾದ ಕೈ ಶಾಸಕರಿಗೆ ವೇದಿಕೆ ಸಜ್ಜು..!
ಫೆ.4ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೂ ಮುನ್ನವೇ ಇಲ್ಲವೆ ಬಜೆಟ್ ಮುನ್ನವೇ ಆಪರೇಷನ್ ಕಮಲ ನಡೆದರೂ ಅಚ್ಚರಿಯಿಲ್ಲ. ಆಡಳಿತಾರೂಢ ಕಾಂಗ್ರೆಸ್‍ನ ಇಬ್ಬರು ಪ್ರಭಾವಿ ಸಚಿವರು ಸೇರಿದಂತೆ 5-7 ಮಂದಿ ಶಾಸಕರು ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿಯ ಕಮಲವನ್ನು ಹಿಡಿಯಲು ಸಜ್ಜಾಗಿದ್ದಾರೆ.
ಬಿಜೆಪಿ ಸೇರಲು ಮುಂದಾಗಿರುವ ಕಾಂಗ್ರೆಸ್‍ನ ಪ್ರಭಾವಿಗಳಲ್ಲಿ ಬೆಂಗಳೂರಿನ ಪ್ರಭಾವಿ ಸಚಿವರೊಬ್ಬರು ಸೇರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಅಷ್ಟಕಷ್ಟೇ ಸಂಬಂಧ ಹೊಂದಿರುವ ಇವರ ಸೇರ್ಪಡೆಗೆ ಪ್ರಭಾವಿ ಧಾರ್ಮಿಕ ಮಠಾಧೀಶರೊಬ್ಬರು ನಡೆಸಿರುವ ಸಂಧಾನ ಯಶಸ್ವಿಯಾಗಿದೆ. ಪ್ರಭಾವಿ ಸಮುದಾಯದ ಈ ಸಚಿವರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು , ಅವರ ಸೇರ್ಪಡೆಯಿಂದ ಬೆಂಗಳೂರಿನಲ್ಲಿ ಪಕ್ಷಕ್ಕೆ ಇನ್ನಷ್ಟು ಆನೆ ಬಲ ಬರಲಿದೆ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಈ ಸಚಿವರ ಸೇರ್ಪಡೆಗೆ ಬೆಂಗಳೂರು ಮೂಲದ ಇಬ್ಬರು ಬಿಜೆಪಿ ನಾಯಕರು ಅಪಸ್ವರ ತೆಗೆದಿದ್ದರು. ಆದರೆ ರಾಷ್ಟ್ರ ಮಟ್ಟದಲ್ಲಿ ಇದರ ಸಂಧಾನ ನಡೆದಿರುವುದರಿಂದ ವಿಧಿಯಿಲ್ಲದೆ ಒಪ್ಪಿಕೊಳ್ಳುವಂತಾಗಿದೆ. ಅವರು ಬಂದರೆ ಬೆಂಗಳೂರು ಮೇಲಿನ ಹಿಡಿತ ನಮಗೆ ಕೈ ತಪ್ಪಬಹುದು ಎಂಬ ಭೀತಿಯಿಂದಾಗಿ ಈ ನಾಯಕರು ಗೊಣಗಾಟ ತೆಗೆದಿದ್ದರು. ಧಾರ್ಮಿಕ ಮುಖಂಡರೊಬ್ಬರು ಬಿಜೆಪಿಯ ರಾಷ್ಟ್ರೀಯ ನಾಯಕರು ಹಾಗೂ ಹಿಂದುತ್ವವನ್ನು ಪ್ರತಿಪಾದಿಸುವ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಪಕ್ಷದ ರಾಷ್ಟ್ರೀಯ ನಾಯಕರು ಸೇರ್ಪಡೆಗೆ ಹಸಿರು ನಿಶಾನೆ ತೋರಿರುವುದರಿಂದ ರಾಜ್ಯ ನಾಯಕರು ಏನೇ ವಿರೋಧಿಸಿದರೂ ಪ್ರಯೋಜನವಿಲ್ಲದಂತಾಗಿದೆ.
ಉಳಿದಂತೆ ಬಿಜೆಪಿ ಸೇರ್ಪಡೆಯಾಗುವ ಪ್ರಮುಖರಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಸಮುದಾಯದ ಸಚಿವರೊಬ್ಬರು ಇದ್ದಾರೆ. ಕಳೆದ ವರ್ಷವಷ್ಟೇ ಸಚಿವ ಸಂಪುಟ ಪುನಾರಚನೆ ವೇಳೆ ಮಂತ್ರಿಯಾಗಿದ್ದ ಇವರು ಇತ್ತೀಚೆಗೆ ಕೆಲವು ಕಾರಣಗಳಿಂದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ದ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರತ್ಯೇಕ ಧರ್ಮದ ವಿಷಯದಲ್ಲಿ ಪಕ್ಷ ತೆಗೆದುಕೊಂಡ ನಿಲುವು ಹಾಗೂ ಅದೇ ಸಮುದಾಯದ ಸಚಿವರ ನಡವಳಿಕೆಗಳಿಂದ ಬೇಸರಗೊಂಡು ಪಕ್ಷಕ್ಕೆ ವಿದಾಯ ಹೇಳಿ ಬಿಜೆಪಿ ಸೇರಲು ಮುಂದಾಗಿದ್ದಾರೆ. ಅಂದಹಾಗೆ ಈ ಸಚಿವರ ಬಿಜೆಪಿ ಸೇರ್ಪಡೆಗೆ ಉತ್ತರ ಕರ್ನಾಟಕದ ಪ್ರಭಾವಿ ಧಾರ್ಮಿಕ ಮುಖಂಡರೊಬ್ಬರು ಪೌರೋಹಿತ್ಯ ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಾ.ಎ.ಬಿ.ಮಲಕರೆಡ್ಡಿ , ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ 5-6 ಶಾಸಕರು ಕಾಂಗ್ರೆಸ್‍ಗೆ ಕೈಕೊಟ್ಟು ಬಿಜೆಪಿಗೆ ಸೇರುವ ಸಾಧ್ಯತೆ ಇದೆ. ಈಗಾಗಲೇ ಕೆಲವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದು , ಬಹುತೇಕ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ಪ್ರದಾನಿ ಸಮ್ಮುಖದಲ್ಲಿ ತಮ್ಮನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಕೋರಿದ್ದಾರೆ. ಆದರೆ ಶಾಸಕ ಸ್ಥಾನ ಅನರ್ಹತೆ ಹಾಗೂ ಕೆಲವು ತಾಂತ್ರಿಕ ಕಾರಣಗಳು ಭವಿಷ್ಯಕ್ಕೆ ಅಡ್ಡಿಯಾಗಬಹುದೆಂಬ ಹಿನ್ನೆಲೆಯಲ್ಲಿ ಎಚ್ಚರಿಕೆ ಹೆಜ್ಜೆ ಹಿಡುವಂತೆ ಸೂಚಿಸಲಾಗಿದೆ.
Comments