5 ದಿನಗಳ ಕಾಲ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಎಚ್ ಡಿಕೆ ಪ್ರವಾಸ

ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿನಿಂದ ಐದು ದಿನಗಳ ಕಾಲ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡಲಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಆಯಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಆಕಾಂಕ್ಷಿಗಳ ಬಗ್ಗೆ ಮಾಹಿತಿಯನ್ನೂ ಕೂಡ ಕಲೆ ಹಾಕಲಿದ್ದಾರೆ.
ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕುಮಾರಸ್ವಾಮಿ, ಪ್ರವಾಸದ ಸಂದರ್ಭದಲ್ಲೇ ಸ್ಥಳೀಯ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರಗಳನ್ನು ರೂಪಿಸಲಿದ್ದಾರೆ. ಇದಕ್ಕಾಗಿ ನಿರಂತರ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಮೂರು ದಿನಗಳ ಕಾಲ ನಿರಂತರ ಪ್ರವಾಸ ಪೂರ್ಣಗೊಳಿಸಿದ್ದು, ಈಗ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಇರುವ ಜನ ಬೆಂಬಲ ಹಾಗೂ ಪಕ್ಷದ ಬಗ್ಗೆ ಜನರ ನಾಡಿಮಿಡಿತ ಅರಿಯುವ ಸಲುವಾಗಿ ಜಿಲ್ಲಾವಾರು ಸರಣಿ ಸಮಾವೇಶಗಳನ್ನು ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ಬೀದರ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಅಭಿಪ್ರಾಯ ಹಾಗೂ ಸಲಹೆಯನ್ನು ಆಲಿಸಲಿದ್ದಾರೆ. ಮಧ್ಯಾಹ್ನ ಹುಮ್ನಾಬಾದ್‍ನಲ್ಲಿ ಹಮ್ಮಿಕೊಳ್ಳಲಿರುವ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.18 ರಂದು ಚಿಂಚೋಳಿ ಹಾಗೂ ಕಲಬುರಗಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜ.19 ರಂದು ಅಳಂದಾ ಹಾಗೂ ಜೇವರ್ಗಿಯಲ್ಲಿ ನಡೆಯಲಿರುವ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.ಜ.20ರಂದು ಯಾದಗಿರಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಜ.21 ರಂದು ಕೊಪ್ಪಳದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲೂ ಉಪಸ್ಥಿತರಿರುವರು. ನಂತರ ಶಿವಮೊಗ್ಗ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿರುವ ಕುಮಾರಸ್ವಾಮಿ, ಜ.22 ರಂದು ಭದ್ರಾವತಿಯಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
Comments