ಸಿಎಂಗೆ ಮಂಡ್ಯದ ಗಂಡು ಅಂಬರೀಶ್ ಬರೆದ ಪತ್ರದಲ್ಲೇನಿದೆ?

ರಾಜ್ಯದಲ್ಲಿ ಬರಗಾಲ ಇರುವುದರಿಂದ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿಲ್ಲ. ಈಗಿರುವ ಪ್ರಮಾಣ ಲೆಕ್ಕ ಹಾಕಿದರೆ ಬೆಂಗಳೂರಿಗೆ ಮತ್ತು ಕಾವೇರಿ ಕೊಳ್ಳದಲ್ಲಿರುವ ಪ್ರದೇಶಗಳ ಜನರಿಗೆ ಕುಡಿಯಲು, ಜಾನುವಾರುಗಳಿಗೆ ಹಾಗೂ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ನೀಡುವುದೂ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯದಲ್ಲಿ ಹಾಹಾಕಾರ ಉಂಟಾಗುತ್ತದೆ.
ಹೀಗಾಗಿ ತಮಿಳುನಾಡಿಗೆ ನೀರು ಬಿಡಬಾರದು ಎಂದು ಆ ಭಾಗದ ಜನಪ್ರತಿನಿಧಿಯಾಗಿ ಮತ್ತು ರೈತರ ಪರವಾಗಿ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ರಾಜಕೀಯ ಚಟುವಟಿಕೆಯಿಂದ ಸ್ವಲ್ಪಮಟ್ಟಿಗೆ ದೂರವೇ ಉಳಿದಿದ್ದ ಹಿರಿಯ ನಟ, ಮಾಜಿ ಸಚಿವ ಅವರು ಸದ್ದುಮಾಡಲು ಮುಂದಾಗಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಅಂಬರೀಶ್, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಮನವಿ ಮಾಡಿದ್ದಾರೆ.
ಪತ್ರದಲ್ಲೇನಿದೆ?
ಕಾವೇರಿ ಜಲಾಶಯದಿಂದ ನೀರು ಬಿಡುವಂತೆ ತಮಿಳುನಾಡು ಸಿಎಂ ಪಳನಿಸ್ವಾಮಿಯವರು ತಮಗೆ ಬರೆದಿರುವ ಪತ್ರಕ್ಕೆ ಸ್ಪಂದಿಸಬಾರದು. ತಾವು ಸ್ಪಂದಿಸುವುದಿಲ್ಲ ಎಂಬ ವಿಶ್ವಾಸ ನನ್ನದು. ಈಗಾಗಲೇ ತಾವು ನೀರು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ನಿಮ್ಮ ನಿಲುವನ್ನು ನಾನು ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲ ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ರೈತ ಸಂಘಟನೆಗಳು, ಹೋರಾಟಗಾರರು ಸ್ವಾಗತಿಸುತ್ತೇವೆ ಮತ್ತು ನಿಮ್ಮ ಜತೆ ನಿಲ್ಲುತ್ತೇವೆ. ನ್ಯಾಯಾಧಿಕರಣದ ತೀರ್ಪಿನ ಅನ್ವಯ ನೀರು ಬಿಡಲು ತಮಿಳುನಾಡಿನ ಸಿಎಂ ಕೋರಿದ್ದಾರೆ. ಆದರೆ, ನಮ್ಮಲ್ಲೇ ನೀರಿಲ್ಲದಿದ್ದರೆ ತಮಿಳುನಾಡಿಗೆ ಎಲ್ಲಿಂದ ಬಿಡುವುದು ಎಂದು ಪ್ರಶ್ನಿಸಿದ್ದಾರೆ ಅಂಬರೀಶ್. ರಾಜ್ಯದ ಸಿಎಂ ಆದ ತಾವು ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ಬಿಡದೆ ರೈತರ ಹಿತವನ್ನು ಕಾಪಾಡಬೇಕು. ಅಗತ್ಯವಾದರೆ ಜನಪ್ರತಿನಿಧಿಗಳು, ರೈತ ಸಂಘಟನೆಗಳು ಹಾಗೂ ಹೋರಾಟಗಾರರ ಮತ್ತು ಸರ್ವ ಪಕ್ಷದ ಮುಖಂಡರ ಸಭೆ ಕರೆದು ಚರ್ಚಿಸಬೇಕೆಂದು ಪತ್ರದಲ್ಲಿ ಸಿಎಂ ಅವರನ್ನು ಶಾಸಕ ಅಂಬರೀಶ್ ಮನವಿ ಮಾಡಿದ್ದಾರೆ.
Comments