ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷಗಳಿಗಿಂತ ಮುಂದಿದೆ
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ ರಾಜ್ಯದಲ್ಲಿ ಮುಂದಿದೆ ಎಂಬುದು ವಾಸ್ತವದ ಸಂಗತಿ. ಚುನಾವಣಾ ಪೂರ್ವ ಸಮೀಕ್ಷೆಗಳು ಏನೇ ಬಂದಿರಲಿ, ಅದರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪದ್ಮನಾಭನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜನರ ಮನಸ್ಸನ್ನು ಅರಿತಿದ್ದು ವಾಸ್ತವದ ಸಂಗತಿ. ಎರಡೂ ಪಕ್ಷಗಳಿಗಿಂತ ಜೆಡಿಎಸ್ ಮುಂದಿದೆ ಎಂದು ಹೇಳಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೇಕಿರುವ ಸರಳ ಬಹುಮತ 113ರ ಗುರಿ ಸಾಧಿಸುತ್ತೇವೆ. ಅದರಲ್ಲಿ ಸಂದೇಹ ಬೇಡ. ನಮ್ಮ ಪಕ್ಷ ಕೂಡ ಆಂತರಿಕವಾಗಿ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತಲೂ ಮುಂದಿದೆ. ಅದರ ಆಧಾರದ ಮೇಲೆ ಆತ್ಮವಿಶ್ವಾಸದಿಂದ ನಮ್ಮ ಪಕ್ಷ ಮುಂದೆ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದೇವೆ ಎಂದರು.
ಕಳೆದ 10 ವರ್ಷಗಳ ಬಿಜೆಪಿ-ಕಾಂಗ್ರೆಸ್ ಆಡಳಿತದಿಂದ ಜನರು ಬೇಸತ್ತಿದ್ದಾರೆ. ನಿರುದ್ಯೋಗಿಗಳು ಉದ್ಯೋಗವಿಲ್ಲದೆ ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಗೆ ಹೋಗುತ್ತೇವೆಯೇ ಹೊರತು ರಾಷ್ಟ್ರೀಯ ಪಕ್ಷಗಳಂತೆ ಹಿಂದುತ್ವದ ಮೇಲಲ್ಲ ಎಂದರು. ಪವಿತ್ರ ಸಂಕ್ರಾಂತಿ ಹಬ್ಬದಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವು ರೀತಿಯ ನೋವು ಅನುಭವಿಸಿದ್ದರು. ಪಕ್ಷೇತರರಾಗಿ ಗೆದ್ದು ಬಹುಮತ ಕೊರತೆ ಎದುರಿಸುತ್ತಿದ್ದ ಬಿಜೆಪಿಗೆ ಬೆಂಬಲ ನೀಡಿದ್ದರು. ಇದೀಗ ಜೆಡಿಎಸ್‍ಗೆ ಸೇರುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಸುಭದ್ರ ಮತ್ತು ಉತ್ತಮ ಆಡಳಿತ ಬಯಸುವವರು ಜೆಡಿಎಸ್‍ಗೆ ಇನ್ನೂ ಹಲವು ಮಂದಿ ಬರುವ ನಿರೀಕ್ಷೆ ಇದೆ.ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
Comments