ಸಿಎಂ ಸಿದ್ದರಾಮಯ್ಯ ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲಲಿ: ಎಚ್‌ಡಿಕೆ ಸವಾಲು

16 Jan 2018 9:32 AM | Politics
282 Report

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಬಿಟ್ಟು ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲಲಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಜೆಡಿಎಸ್‌ ಅಧಿಕಾರಕ್ಕೆ ಬರುವುದಿಲ್ಲ ಎಂದು ಪದೇಪದೆ ಲಘುವಾಗಿ ಮಾತನಾಡುವ ಸಿದ್ದರಾಮಯ್ಯ, ಜೀವನದಲ್ಲಿ ಎಂದೂ ಪಕ್ಷ ಕಟ್ಟಿದವರಲ್ಲ. ಬೇರೊಬ್ಬರು ಕಟ್ಟಿದ ಪಕ್ಷದಲ್ಲಿ ಅಧಿಕಾರ ಅನುಭವಿಸಿದವರು. ಅವರಿಗೆ ತಮ್ಮ ಸ್ವ ಸ್ವಾಮರ್ಥ್ಯದ ಮೇಲೆ ನಂಬಿಕೆ ಇದ್ದರೆ ಪಕ್ಷೇತರರಾಗಿ ನಿಂತು ಗೆಲ್ಲಲಿ ಎಂದು ಹೇಳಿದ್ದಾರೆ.ಪದ್ಮನಾಭನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್‌ನಿಂದ ಹೋದಾಗ ಕಾಂಗ್ರೆಸ್‌ನ ದಿಗ್ಗಜರ ನೆರವು ಪಡೆದು ಅತ್ಯಲ್ಪ ಮತಗಳಿಂದ ತಿಣುಕಾಡಿ ಗೆದ್ದರು. ಅವರೆಂದೂ ಪಕ್ಷೇತರರಾಗಿ ನಿಂತು ಗೆದ್ದಿಲ್ಲ,ದೇವೇಗೌಡರು ರಾಜಕೀಯ ಜೀವನ ಆರಂಭಿಸಿದ್ದೇ ಪಕ್ಷೇತರರಾಗಿ ಗೆದ್ದು ಎಂದು ತಿಳಿಸಿದರು.

ಅಪ್ಪ-ಮಕ್ಕಳ ಪಕ್ಷ ಎಂದು ಆರೋಪಿಸುವ ಸಿದ್ದರಾಮಯ್ಯ ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು ಯಾಕೆ ಟಿಕೆಟ್‌ ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.ಅತಂತ್ರ ಸ್ಥಿತಿ ನಿರ್ಮಾಣವಾಗಲಿ ಎಂದು ಜೆಡಿಎಸ್‌ ಹೊಂಚು ಹಾಕುತ್ತಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ವಾಸ್ತವ ವಿಚಾರ ಎಂದರೆ ಸಿದ್ದರಾಮಯ್ಯ ಅವರಿಗೆ ಸ್ವಂತ ಶಕ್ತಿಯ ಮೇಲೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆಂಬ ನಂಬಿಕೆಯಿಲ್ಲ. ಹೀಗಾಗಿ, ಅವರು ಮತ್ತೆ ದೇವೇಗೌಡರನ್ನು ಹೇಗೆ ಮರುಳು ಮಾಡುವುದು, ಹೇಗೆ ಹತ್ತಿರವಾಗುವುದು ಎಂದು ಎದುರು ನೋಡುತ್ತಿದ್ದಾರೆಂದು ಲೇವಡಿ ಮಾಡಿದರು.ರಾಜ್ಯದಲ್ಲಿ ಯಾವ ಸಮೀಕ್ಷೆಗಳು ಏನಾದರೂ ಹೇಳಿಕೊಳ್ಳಲಿ. ನಾನೂ ಸಮೀಕ್ಷೆ ಮಾಡಿಸಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನ ಜೆಡಿಎಸ್‌ ಗೆಲ್ಲಲಿದೆ. ರಾಜ್ಯದ ಜನರ ನಾಡಿ ಮಿಡಿತ ನನಗೆ ಗೊತ್ತಿದೆ ಎಂದು ಹೇಳಿದರು. ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೂ ಎಂದೂ ಹೋಗಿಲ್ಲ. ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳೇ ನಮ್ಮ ಮನೆ ಬಾಗಿಲಿಗೆ ಬಂದು ನಂತರ ಬೆನ್ನಿಗೆ ಚೂರಿ  ಹಾಕಿವೆ ಎಂದು ತಿಳಿಸಿದರು.

Edited By

Shruthi G

Reported By

Shruthi G

Comments