ರೇಷ್ಮೆ ನಾಡಿನಲ್ಲಿ ಗರಿಗೆದರಿದ ರಾಜಕೀಯ, ಕುಮಾರಣ್ಣನಿಗೆ ಪ್ರತಿಸ್ಪರ್ಧಿ ನಿಲ್ಲಿಸಲು ವಿಪಕ್ಷಗಳಿಗೆ ಸಂಕಷ್ಟ...!!
2018ರ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗದಿದ್ದರೂ ಚುನಾವಣೆ ಸಿದ್ಧತೆಗಳು ಭರದಿಂದ ಸಾಗಿವೆ. ರೇಷ್ಮೆ ಉತ್ಪಾದನೆಯಲ್ಲಿ ಇಡೀ ರಾಷ್ಟ್ರದ ಗಮನ ಸೆಳೆದಿರುವ ರೇಷ್ಮೆ ನಾಡು ರಾಮನಗರ ಜಿಲ್ಲೆ ರಾಜ್ಯ ರಾಜಕೀಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಅದರಲ್ಲೂ ರಾಮನಗರ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಇದೇ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾಗಿ ಮುಖ್ಯಮಂತ್ರಿಗಳಾಗಿದ್ದರು. ಮೂವರು ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದ ಇತಿಹಾಸ ಈ ಕ್ಷೇತ್ರಕ್ಕಿದ್ದರೂ ಎಂದೂ ಕೂಡ ಬಿಜೆಪಿ ಪ್ರಾಬಲ್ಯಕ್ಕೆ ಬಂದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ತೀವ್ರ ಸ್ಪರ್ಧೆ ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಕಂಡು ಬಂದಿದೆ.ರಾಜಕೀಯ ಚಟುವಟಿಕೆಗಳು ಕೂಡ ದಿನದಿಂದ ದಿನಕ್ಕೆ ಬಿರುಸಾಗುತ್ತಿವೆ. ರಾಮನಗರ ಕ್ಷೇತ್ರ ಕಳೆದ 2004 ರಿಂದ ಜೆಡಿಎಸ್‍ನ ಭದ್ರ ಕೋಟೆಯಾಗಿದೆ. ಇಲ್ಲಿ ಪ್ರತಿ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಗಳೇ ಜಯಗಳಿಸುತ್ತಾ ಬಂದಿದ್ದಾರೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರಂತರವಾಗಿ ಚುನಾಯಿತರಾಗುತ್ತಾ ಬಂದಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸರ್ವಾನುಮತದ ಅಭ್ಯರ್ಥಿಯಾಗಿ ಕುಮಾರಸ್ವಾಮಿಯವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸ್ಥಳೀಯ ಜೆಡಿಎಸ್‍ನ ಮುಖಂಡರ್ಯಾರೂ ಕೂಡ ಸದ್ಯಕ್ಕೆ ಟಿಕೆಟ್ ಆಕಾಂಕ್ಷಿಗಳಾಗಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಜಿಯಾವುಲ್ಲಾ, ರಾಮನಗರ ಜಿ.ಪಂ. ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್.ಚಂದ್ರಶೇಖರ್ ರಾಮನಗರದ ಕಾಂಗ್ರೆಸ್ ಪಕ್ಷದ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.ಈ ಮೂವರಲ್ಲಿ ಯಾರು ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಕುಮಾರಸ್ವಾಮಿಯವರಿಗೆ ಸಮರ್ಥ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರು ಹುಡುಕಾಟ ನಡೆಸತೊಡಗಿದ್ದಾರೆ. ಈ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಜನಪ್ರಿಯತೆ, ಗೆಲ್ಲುವ ಸಾಮಥ್ರ್ಯ ಮೊದಲಾದ ಲೆಕ್ಕಾಚಾರಗಳನ್ನು ಕಾಂಗ್ರೆಸ್ ಪಕ್ಷದ ನಾಯಕರು ಮಾಡತೊಡಗಿದ್ದು, ಕೊನೆ ಗಳಿಗೆಯಲ್ಲಿ ಯಾರನ್ನು ಕಣಕ್ಕಿಳಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಈ ಕ್ಷೇತ್ರದಲ್ಲಿ ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದೆಯಾದರೂ ಕಾಂಗ್ರೆಸ್‍ಗಾಗಲಿ, ಜೆಡಿಎಸ್‍ಗಾಗಲಿ ಪ್ರತಿಸ್ಪರ್ಧೆ ನೀಡಿಲ್ಲ. ಈ ಬಾರಿ ಚುನಾವಣೆಯಲ್ಲಿ ಜಗದೀಶ್‍ಗೌಡ ಎಂಬುವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಜೆಡಿಎಸ್ ಹೊರತುಪಡಿಸಿ ಉಳಿದೆರಡು ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ. ಅಲ್ಲದೆ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್-ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಬದಲಾಗುತ್ತಿರುವುದು ಈ ಕ್ಷೇತ್ರದ ಮತ್ತೊಂದು ವಿಶೇಷ. ಜೆಡಿಎಸ್ ಈಗಾಗಲೇ ಕುಮಾರಸ್ವಾಮಿಯವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಜೊತೆಗೆ ಭಾವಿ ಮುಖ್ಯಮಂತ್ರಿ ಎಂದೇ ಭಾವಿಸಿ ಪ್ರಚಾರದಲ್ಲಿ ತೊಡಗಿದೆ. ರಾಜ್ಯದ ಜನರಿಗೆ ತಮ್ಮದೇ ಆದ ಭರವಸೆಗಳನ್ನು ಕುಮಾರಸ್ವಾಮಿ ನೀಡುತ್ತಾ ಬಂದಿದ್ದಾರೆ. ತಮ್ಮ ಸ್ವಕ್ಷೇತ್ರವಾದ ರಾಮನಗರದಲ್ಲಿ ಸ್ಪರ್ಧಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಜೊತೆಗೆ ಚುನಾವಣೆ ಸಿದ್ದತೆಗಳನ್ನು ಕೂಡ ಮಾಡಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರ ಇಡೀ ರಾಜ್ಯದ ಗಮನಸೆಳೆಯುವಲ್ಲಿ ಆಶ್ಚಯಪಡಬೇಕಿಲ್ಲ.
Comments